ಹಳ್ಳಿ ಬಸವೇಶ್ವರ ಜಾತ್ರೋತ್ಸವದಲ್ಲಿ 17 ಜೋಡಿಗಳ ಸಾಮೂಹಿಕ ವಿವಾಹ ಜರುಗಿತು. ಶಾಸಕ ಆರ್.ಬಸನಗೌಡ ತುರ್ವಿಹಾಳ, ಸಂತೆಕೆಲ್ಲೂರು ಗುರುಬಸವ ಸ್ವಾಮೀಜಿ, ಮಹಾಂತಿನಮಠದ ಮಹಾಂತ ಸ್ವಾಮೀಜಿ, ಹುನಕುಂಟೆಯ ಶರಣಯ್ಯ ತಾತ ಇತರರಿದ್ದರು.  
ರಾಯಚೂರು

ಸಾಲಮುಕ್ತ ಜೀವನ ನಡೆಸಿ

ಮಸ್ಕಿ: ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಬೀಳಲಿದೆ. ನವದಂಪತಿಗಳು ಅನಗತ್ಯ ಖರ್ಚು ಮಾಡದೆ ಸಾಲಮುಕ್ತ ಜೀವನ ನಡೆಸಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತಾಲೂಕಿನ ಕುಣಿಕೆಲ್ಲೂರಿನಲ್ಲಿ ಹಳ್ಳಿ ಬಸವೇಶ್ವರ ದೇವರ ಜಾತ್ರೋತ್ಸವ ಅಂಗವಾಗಿ ಏರ್ಪಡಿಸಿದ್ದ 17 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ ಮಾತನಾಡಿ, ಬಸವೇಶ್ವರ ಪುಣ್ಯಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ಸಾಮರಸ್ಯದ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಸತಿಪತಿ ಒಂದಾದ ಸಂತೃಪ್ತಿ ಜೀವನ ಸನ್ಮಾರ್ಗಕ್ಕೆ ದಾರಿಯಾಗಲಿದೆ ಎಂದರು. 
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಸಂತೆಕೆಲ್ಲೂರು ಮಹಾಂತಿನಮಠದ ಮಹಾಂತ ಸ್ವಾಮೀಜಿ, ಹುನಕುಂಟೆಯ ಶರಣಯ್ಯ ತಾತ, ಆದನಗೌಡ ಪಾಟೀಲ್, ಮಲ್ಲನಗೌಡ ಪೊಪಾ, ಚಂದ್ರಶೇಖರ ಹಿರೇಮಠ, ಸಿದ್ದನಗೌಡ ಪೊಪಾ, ಪಂಪಣ್ಣ ಜಾವೂರ, ಶಾಂತಯ್ಯ ಪೂಜಾರಿ, ಶರಣಬಸವ ಸೊಪ್ಪಿಮಠ, ಘನಮಠದಯ್ಯ ಸಾಲಿಮಠ, ಶರಣಯ್ಯ ಗುರುವಿನ ಇತರರಿದ್ದರು.
ರಥೋತ್ಸವ: ಜಾತ್ರೋತ್ಸವ ನಿಮಿತ್ತ ಬೆಳಗ್ಗೆ ಹಳ್ಳಿ ಬಸವೇಶ್ವರ ದೇವಸ್ಥಾನದಲ್ಲಿ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸಂಜೆ ದೇವರ ರಥೋತ್ಸವ ಭಕ್ತರ ಹರ್ಷೋದ್ಗಾರದ ನಡುವೆ ವಿಜೃಂಭಣೆಯಿಂದ ಜರುಗಿತು. ಗಂಗಾವತಿ ತಾಲೂಕಿನ ಕೆಸರಟ್ಟಿ, ಆಲ್ವಿ, ಲಿಂಗಸುಗೂರು, ಮಸ್ಕಿ, ಸಂತೆಕೆಲ್ಲೂರು, ಮಟ್ಟೂರು, ಗೋನವಾರ, ಅಂಕುಶದೊಡ್ಡಿ, ಕುಣಿಕೆಲ್ಲೂರು-ಮಿಟ್ಟಿಕೆಲ್ಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.