ಮಾನ್ವಿಯಲ್ಲಿ ಭಾನುವಾರ ‘ನುಡಿ ನೈವೇದ್ಯ’ ಕೃತಿಯನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ ಬಿಡುಗಡೆ ಮಾಡಿದರು. ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು, ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ, ಪ್ರಕಾಶಕಿ ರಾಚಮ್ಮ ಸಾಂಬಯ್ಯಸ್ವಾಮಿ, ಲೇಖಕ ಡಾ.ಚಂದ್ರಶೇಖರ ಸುವರ್ಣಗಿರಿಮಠ ಇತರರಿದ್ದರು.
ಮಾನ್ವಿ: ಆಧುನಿಕ ಸಾಹಿತಿಗಳು ವಚನಗಳನ್ನು ಕಟ್ಟುವಾಗ ಯಾವ ಸಾಹಿತ್ಯದ ಪ್ರಭಾವಕ್ಕೆ ಒಳಗಾಗದೆ ತಮ್ಮ ಅನುಭವಗಳಿಂದ ಬರೆದಾಗ ಮಾತ್ರ ಜನರನ್ನು ತಲುಪುವುದಕ್ಕೆ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಸುವರ್ಣಗಿರಿ ಪ್ರಕಾಶನ ಹಮ್ಮಿಕೊಂಡಿದ್ದ ಆಧುನಿಕ ವಚನಗಳ ಸಂಕಲನ ‘ನುಡಿ ನೈವೇದ್ಯ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ವಚನಗಳು ನಮ್ಮನ್ನು 12ನೇ ಶತಮಾನಕ್ಕೆ ಕರೆದುಕೊಂಡು ಹೋಗುತ್ತವೆ. ಶರಣರು ಅನುಭವಗಳಿಂದ ಬರೆದ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಆಧುನಿಕ ವಚನಗಳನ್ನು ರಚನೆ ಮಾಡುವುದಕ್ಕೆ ಸಾಹಿತಿ ಸಿದ್ದಲಿಂಗಯ್ಯ ಅವರು ನಾಂದಿ ಹಾಡಿದ ನಂತರ ಅನೇಕ ಸಾಹಿತಿಗಳು ಆಧುನಿಕ ದೃಷ್ಟಿಕೋನದಿಂದ ವಚನಗಳನ್ನು ರಚಿಸಿದ್ದಾರೆ. ಸಾಹಿತಿ ಡಾ.ಚಂದ್ರಶೇಖರ ಸುವರ್ಣಗಿರಿಮಠ ತಮ್ಮ ‘ನುಡಿ ನೈವೇದ್ಯ’ ಕೃತಿಯಲ್ಲಿ 101 ವಚನಗಳನ್ನು ಉತ್ತಮವಾಗಿ ಬರೆದಿದ್ದಾರೆ. ವಚನಗಳು ನಮಗೆ ಸತ್ಯದ ಮಾರ್ಗ ತೋರಿಸುತ್ತವೆ ಎಂದು ತಿಳಿಸಿದರು.
ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ಶರಣರು ಜಗತ್ತಿಗೆ ಹೇಳುವುದನ್ನೆಲ್ಲ ಹೇಳಿದ್ದಾರೆ. ಆದರೆ, ಇಂದು ಅವುಗಳ ಪಾಲನೆ ಮಾತ್ರ ಆಗಬೇಕಾಗಿದೆ. ಎಲ್ಲಿಯವರೆಗೂ ನಮ್ಮಲ್ಲಿ ಆಸೆ ಎನ್ನುವುದು ಅಳಿಯುವುದಿಲ್ಲವೋ, ಪ್ರಕೃತಿ ಜತೆಜತೆಗೆ ಬದುಕುವುದನ್ನು ಎಲ್ಲಿಯವರೆಗೂ ಕಲಿಯುವುದಿಲ್ಲವೋ ಅಲ್ಲಿಯವರೆಗೆ ನಾವು ಸುಂದರ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲವೆಂದು ವಚನಗಳು ತಿಳಿಸುತ್ತವೆ ಎಂದರು.
ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಕೃತಿಯ ಕುರಿತು ಸಾಹಿತಿ ರಮೇಶಬಾಬು ಯಾಳಗಿ ಮಾತನಾಡಿದರು. ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಲೇಖಕ ಡಾ.ಚಂದ್ರಶೇಖರ ಸುವರ್ಣಗಿರಿಮಠ, ಮಸ್ಕಿಯ ವೈದ್ಯ ಶಿವಶರಣಪ್ಪ ಇತ್ಲಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು, ಕಸಾಪ ತಾಲೂಕು ಅಧ್ಯಕ್ಷ ಶರಣಬಸವ ನೀರಮಾನ್ವಿ, ಸಿಂಧನೂರು ಕಸಾಪ ನಿಕಟಪೂರ್ವ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ನಿವೃತ್ತ ನ್ಯಾಯಾಧೀಶ ಗಿರಯ್ಯ ಪಾಟೀಲ್, ಡಾ.ಚೈತನ್ಯ ಪ್ರಭು, ಶಂಕ್ರಪ್ಪ ಚಿಕ್ಕಗೌಡರ ಮಟಮಾರಿ, ಪ್ರಕಾಶಕಿ ರಾಚಮ್ಮ ಸಾಂಬಯ್ಯಸ್ವಾಮಿ, ತ್ರಯಂಬಕೇಶ ಮೇದಾ ಇತರರಿದ್ದರು.