ಅತ್ತನೂರು ಗ್ರಾಮದ ಸಿದ್ಧಾರೂಢಸ್ವಾಮಿ ಆಶ್ರಮದಲ್ಲಿ ಶ್ರೀ ಜಯಕೃಷ್ಣ ಸ್ವಾಮಿ 16ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಕಲ್ಲೂರಿನ ಶಿವರಾಮಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾಮಾವರಂನ ಶಿವರಾಮ ಅವಧೂತ ಆಶ್ರಮದ ಪೀಠಾಧಿಪತಿ ಅವ್ಯಕ್ತಾನಂದ ಸರಸ್ವತಿ ಮಹಾಸ್ವಾಮಿ, ಮಂಗಳ ಚೈತನ್ಯ ಸ್ವಾಮಿ ಇದ್ದರು. 
ರಾಯಚೂರು

ಸಂತ-ಮಹಾತ್ಮರ ಸಂಗದಿಂದ ಬದುಕು ಸಾರ್ಥಕ

ಪ್ರಮುಖ ಮುಖ್ಯಾಂಶಗಳು

  • ಆಧೋನಿಯ ಅವ್ಯಕ್ತಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ
  • ಸಿರವಾರ ಅತ್ತನೂರು ಸತ್ಸಂಗ ಕಾರ್ಯಕ್ರಮ
ಸಿರವಾರ: ಮನುಷ್ಯ ಸಾರ್ಥಕ ದಾರಿಯಲ್ಲಿ ನಡೆಯಬೇಕೆಂದರೆ ಸಂತರ, ಮಹಾತ್ಮರ ಸಂಗದಲ್ಲಿರಬೇಕು ಎಂದು ಆಂಧ್ರದ ಆಧೋನಿಯ ಕಾಮಾವರಂನ ಶಿವರಾಮ ಅವಧೂತ ಆಶ್ರಮದ ಪೀಠಾಧಿಪತಿ ಅವ್ಯಕ್ತಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ತಾಲೂಕಿನ ಅತ್ತನೂರು ಗ್ರಾಮದ ಸಿದ್ಧಾರೂಢಸ್ವಾಮಿ ಆಶ್ರಮದಲ್ಲಿ ಶ್ರೀ ಜಯಕೃಷ್ಣ ಸ್ವಾಮಿ ಅವರ 16ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಬದುಕಿದ್ದಾಗ ಪರೋಪಕಾರಿಯಾಗಿರುವ ಸಂತರು, ಮಹಾತ್ಮರು, ಪುಣ್ಯಾತ್ಮರು ದೇಹತ್ಯಾಗದ ನಂತರವೂ ಪುಣ್ಯಾರಾಧನೆ, ಸತ್ಸಂಗ ಕಾರ್ಯಕ್ರಮಗಳಿಗೆ ನಿಮಿತ್ತರಾಗಿ ಲೋಕೋದ್ಧಾರಕರಾಗಿರುತ್ತಾರೆ. ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಸ್ಮರಣೆಯೊಂದಿಗೆ ಅವರ ಜ್ಞಾನದ ತಿರುಳನ್ನು ಅರಿತು ಆತ್ಮಸುಖಿಗಳಾಗಿ ಬಾಳಬೇಕು ಎಂದು ತಿಳಿಸಿದರು.
ಕಲ್ಲೂರಿನ ಜಗದ್ಗುರು ಶಂಕರಾಚಾರ್ಯರ ಮಠದ ಪೀಠಾಧಿಪತಿ ಶಿವರಾಮಾನಂದ ಭಾರತೀ ಸ್ವಾಮೀಜಿ ಮಾತನಾಡಿ, ಭಗವಂತನ ಕೃಪೆಗೆ ಮನುಷ್ಯನ ಧನ್ಯತೆಗೆ ಒಂದೊಂದು ಯುಗದಲ್ಲಿ ಒಂದೊಂದು ವಿಶೇಷತೆಗಳಿವೆ. ತ್ರೇತಾಯುಗ, ದ್ವಾಪರಯುಗ ಮುಂತಾದ ಕಾಲದಲ್ಲಿ ತಪಸ್ಸು, ಯಜ್ಞಗಳಲ್ಲಿ ವಿಶೇಷತೆ ಇತ್ತು. ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆಯೇ ವಿಶೇಷ ಶಕ್ತಿ ಹೊಂದಿದ್ದು, ಅದು ಮುಕ್ತಿಯೆಡೆಗೆ ಕೊಂಡೊಯ್ಯುತ್ತದೆ ಹಾಗೂ ಧನ್ಯರನ್ನಾಗಿ ಮಾಡುತ್ತದೆ. ಆಧ್ಯಾತ್ಮಿಕ ಚಿಂತನೆಯು ಮನುಷ್ಯರನ್ನು ಎಲ್ಲ ತಾಪಗಳಿಂದ ಮುಕ್ತರನ್ನಾಗಿಸುತ್ತದೆ ಎಂದು ತಿಳಿಸಿದರು. ಮಂಗಳ ಚೈತನ್ಯಸ್ವಾಮಿ, ಶ್ರೀ ಸಿದ್ಧಾರೂಢ ಸ್ವಾಮಿ ಭಕ್ತವೃಂದ, ಗ್ರಾಮಸ್ಥರು ಪಾಲ್ಗೊಂಡಿದ್ದರು.