ಅರಕೇರಾ ಸಮೀಪದ ಶಿವಂಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಂತರ್ ಶಾಲಾ ವಿಜ್ಞಾನ ಮೇಳ ಕಾರ್ಯಕ್ರಮವನ್ನು ಡಯಟ್ ಉಪನಿರ್ದೇಶಕ (ಅಭಿವೃದ್ಧಿ) ಚಂದ್ರಶೇಖರ ಭಂಡಾರಿ ಉದ್ಘಾಟಿಸಿದರು. ಕ್ರೈ ಸಂಸ್ಥೆಯ ದಕ್ಷಿಣ ಭಾರತ ಪ್ರಾದೇಶಿಕ ನಿರ್ದೇಶಕ ಜಾನ್ ರಾಬೋರ್ಟ್, ಬಿಇಒ ಮಲ್ಲಿಕಾರ್ಜುನ, ವಿಜ್ಞಾನ ಪ್ರಚಾರಕ ಹರಿವರ್ಸನ್ ವಿನಾಯಗಮ್, ಡಯಟ್ ಉಪನ್ಯಾಸಕ ಗದ್ಗಿ ಬಸಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ ಇತರರಿದ್ದರು. 
ರಾಯಚೂರು

ವಿಜ್ಞಾನವಿಲ್ಲದೇ ಬದುಕು ಅಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ವಿವಿಧ
  • ಮಾದರಿ
  • ಪ್ರದರ್ಶನ
ಅರಕೇರಾ: ವಿಜ್ಞಾನ ಕೇವಲ ಜ್ಞಾನವಲ್ಲ ಯೋಚಿಸುವ ಮಾರ್ಗವಾಗಿದೆ ಎಂದು ಡಯಟ್ ಉಪನಿರ್ದೇಶಕ (ಅಭಿವೃದ್ಧಿ) ಚಂದ್ರಶೇಖರ ಭಂಡಾರಿ ಹೇಳಿದರು.
ತಾಲೂಕಿನ ಶಿವಂಗಿ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಹಾಗೂ ಕ್ರೈ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಂತರ್ ಶಾಲಾ ವಿಜ್ಞಾನ ಮೇಳ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.
ವಿಜ್ಞಾನ ಸತ್ಯವನ್ನು ಹುಡುಕುತ್ತದೆ. ಇಂದು, ವರ್ತಮಾನ, ಭವಿಷ್ಯಕ್ಕೆ ವಿಜ್ಞಾನವಿಲ್ಲದೇ ಬದುಕಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ವೈಜ್ಞಾನಿಕ ಪರಿಕಲ್ಪನೆಗಳನ್ನು ಪ್ರಾಯೋಗಿಕವಾಗಿ ಅನ್ವೇಷಿಸಲು, ತಮ್ಮ ಸೃಜನಶೀಲ ಮತ್ತು ಸಮಸ್ಯೆ ಪರಿಹರಿಸುವ ಕೌಶಲಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಎಂದರು.
ಕ್ರೈ ಸಂಸ್ಥೆಯ ದಕ್ಷಿಣ ಭಾರತ ಪ್ರಾದೇಶಿಕ ನಿರ್ದೇಶಕ ಜಾನ್ ರಾಬೋರ್ಟ್ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ, ಶಿಕ್ಷಣ, ಅಪೌಷ್ಟಿಕ ನಿವಾರಣೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕ್ರೈ ಸಂಸ್ಥೆ ಬದ್ಧವಾಗಿ ಕೆಲಸ ಮಾಡುತ್ತಿದೆ. ಇಂದಿನ ಮಕ್ಕಳು ಮುಂದಿನ ವಿಜ್ಞಾನಿಗಳಾಗಲು ಸವಾಲು ಹಾಕಿ ವಿದ್ಯಾಭ್ಯಾಸ ಮಾಡಬೇಕು ಎಂದರು.
ಬಿಇಒ ಮಲ್ಲಿಕಾರ್ಜುನ ಮಾತನಾಡಿ, ವಿಜ್ಞಾನ ಮೇಳದಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಮೂಢನಂಬಿಕೆ ನಿವಾರಣೆ, ಪರಿಸರ ಸಂರಕ್ಷಣೆಗೆ ಸಹಾಯ ಮಾಡುತ್ತದೆ ಎಂದರು.
ಜಿಲ್ಲೆಯ 42 ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ವಿಜ್ಞಾನ ಮೇಳದಲ್ಲಿ ಪಾಲ್ಗೊಂಡು ವಿವಿಧ ಮಾದರಿ ವಸ್ತು ಪ್ರದರ್ಶನ ಮಾಡಿದರು. ಬೆಂಕಿ ಪೊಟ್ಟಣದ ಸಹಾಯವಿಲ್ಲದೇ ವಿಜ್ಞಾನದ ಅನ್ವೇಷಣೆಯಿಂದ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಾಜಕುಮಾರ ಡೋಣಿ, ಎಸಿಡಿಪಿಒ ಗಂಗಮ್ಮ ಎಸ್ ಕಾಳೇನೂರು, ಮುಖ್ಯ ಶಿಕ್ಷಕ ಶಿವಜಾತಪ್ಪ, ಎಸ್ಡಿಎಂಸಿ ಅಧ್ಯಕ್ಷ ಶರಣಯ್ಯ ಸ್ವಾಮಿ, ಪ್ರಮುಖರಾದ ಧನಂಜಯ ಶಿವಂಗಿ, ಶಿವಕಾಂತಿ, ಶಕುಂತಲಾ, ಡಿಂಗ್ರಿ ನರಸಪ್ಪ, ಕೆಪಿ ಅನಿಲ್ ಕುಮಾರ, ಶಂಶುದ್ದೀನ್, ಡಾ.ರಜಾಕ್ ಉಸ್ತಾದ್, ಲಕ್ಷ್ಮಣ ಛಲವಾದಿ, ತಾಯಪ್ಪ ಹೆಗ್ಗಸನಹಳ್ಳಿ, ರಾಮಣ್ಣ ಎನ್ ಗಣೇಕಲ್, ಮಲ್ಲಯ್ಯ ಖಾನಾಪುರ ಇತರರಿದ್ದರು.