ದೇವದುರ್ಗದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ಅಧ್ಯಕ್ಷತೆಯಲ್ಲಿ ರಾಯಚೂರು ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆ ನಡೆಯಿತು. ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಅಮರೇಶ ಬಿರಾದಾರ್, ತಾಪಂ ಇಒ ಬಸವರಾಜ ಹಟ್ಟಿ, ಪಿಐ ಎಸ್.ಮಂಜುನಾಥ, ಸಮಾಜ ಕಲ್ಯಾಣ ಅಧಿಕಾರಿ ರಾಜಕುಮಾರ್, ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ, ಲೋಕೋಪಯೋಗಿ ಇಲಾಖೆ ಎಇಇ ಬಕ್ಕಪ್ಪ ಇತರರಿದ್ದರು. 
ರಾಯಚೂರು

ನಾಡಹಬ್ಬದಂತೆ ಜಿಲ್ಲಾ ಉತ್ಸವ ಆಚರಿಸೋಣ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ
  • ಮಟ್ಟದ
  • ಸಾಹಿತ್ಯ ಸಮ್ಮೇಳನ
ಶಾಸಕಿ ಕರೆಮ್ಮ ಜಿ.ನಾಯಕ ಸಲಹೆ ದೇವದುರ್ಗದಲ್ಲಿ ಪೂರ್ವಭಾವಿ ಸಭೆ
ದೇವದುರ್ಗ: ಹಲವು ವರ್ಷಗಳ ನಂತರ ಸರ್ಕಾರ ರಾಯಚೂರು ಜಿಲ್ಲಾ ಉತ್ಸವ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಎಲ್ಲರೂ ಪಕ್ಷಭೇದ ಮರೆತು ಹಂಪಿ, ನಾಡಹಬ್ಬ ದಸರಾ ಉತ್ಸವದಂತೆ ಜಿಲ್ಲಾ ಉತ್ಸವವನ್ನು ಆಚರಣೆ ಮಾಡೋಣ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಪಟ್ಟಣದ ತಾಲೂಕು ಆಡಳಿತಸೌಧ ಸಭಾಂಗಣದಲ್ಲಿ ರಾಯಚೂರು ಜಿಲ್ಲಾ ಉತ್ಸವ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಸೋಮವಾರ ಮಾತನಾಡಿದರು. ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ ಯಶಸ್ವಿಯಾದಂತೆ ಜಿಲ್ಲಾ ಉತ್ಸವವನ್ನು ರಾಜ್ಯದ ಗಮನ ಸೆಳೆಯುವಂತೆ ಮಾಡೋಣ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಕಾರ್ಯಕ್ರಮ ಮಾಡುವಾಗ ಸಣ್ಣಪುಟ್ಟ ಸಮಸ್ಯೆ, ಗೊಂದಲ, ತಪ್ಪುಗಳು ಆಗುವುದು ಸಹಜ. ಅದನ್ನೇ ದೊಡ್ಡದು ಮಾಡುವುದು ಬೇಡ. ಸಂಘ ಸಂಸ್ಥೆಗಳು, ಸಾರ್ವಜನಿಕರ ಸಲಹೆ ಸೂಚನೆ ಪಡೆಯಲು ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು.
ಅರಕೇರಾ ತಹಸೀಲ್ದಾರ್ ಅಮರೇಶ ಬಿರಾದಾರ್ ಮಾತನಾಡಿ, ಜ.29, 30, 31ರಂದು ಕಾರ್ಯಕ್ರಮ ನಡೆಯಲಿದ್ದು, ರಾಯಚೂರು ಕೃಷಿ ವಿಜ್ಞಾನಗಳ ವಿವಿ, ರಂಗಮಂದಿರ, ಕನ್ನಡಭವನ, ಮಹಿಳಾ ಭವನ ಸೇರಿ ಐದು ಕಡೆ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಸಂಜೆ 6ಗಂಟೆಗೆ ಸಿನಿಮಾ ಕಲಾವಿದರಿಂದ ಸಂಗೀತ, ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಆಹಾರ ಮೇಳ, ವಿಜ್ಞಾನ ಮೇಳ ಸೇರಿ ವಿವಿಧ ಮೇಳಗಳು ಜರುಗಲಿವೆ. ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ದೂರುಗಳ ಸುರಿಮಳೆ: ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ದೂರುಗಳ ಸುರಿಮಳೆಗೈದರು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಮಾತನಾಡಿ, ಜಿಲ್ಲಾ ಉತ್ಸವ ರಾಯಚೂರು ಸಿಟಿಗೆ ಮಾತ್ರ ಸೀಮಿತವಾಗಿದ್ದು ತಾಲೂಕು ಕೇಂದ್ರದವರನ್ನು ಪರಿಗಣಿಸಿಲ್ಲ. ಪೂರ್ವಭಾವಿ ಸಭೆ, ಸಿದ್ಧತೆ, ಕಮಿಟಿಯಲ್ಲಿ ರಾಯಚೂರು ಸಿಟಿಯವರೇ ತುಂಬಿದ್ದಾರೆ. ಸಾಹಿತ್ಯ ಪರಿಷತ್, ಕನ್ನಡಪರ ಸಂಘಟನೆಗಳಿಗೆ ಅವಕಾಶ ನೀಡಿಲ್ಲ ಎಂದು ದೂರಿದರು.
ಹೋರಾಟಗಾರ ಹನುಮಂತಪ್ಪ ಮನ್ನಾಪುರ ಮಾತನಾಡಿ, ಸಭೆ, ಸಮಾರಂಭದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಲ್ಲ. ಸಂಘ ಸಂಸ್ಥೆಗಳನ್ನು ಕೈಬಿಟ್ಟರೆ ಕಾರ್ಯಕ್ರಮಕ್ಕೆ ಮೆರುಗು ಬರುತ್ತಾ?. ಅಧಿಕಾರಿಗಳು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಹೀಗೆ ಮಾಡಿದರೆ ನಮ್ಮ ದಾರಿ ನಮಗೆ ಎಂದು ಎಚ್ಚರಿಸಿದರು. ಬಸವರಾಜ ಬ್ಯಾಗವಾಟ ಮಾತನಾಡಿ, ಹಂಪಿ ಉತ್ಸವ ಮಾದರಿಯಲ್ಲಿ ಗ್ರಾಮೀಣ ಭಾಗದ ಜನರು ಕಾರ್ಯಕ್ರಮಕ್ಕೆ ಬರಲು ಉಚಿತ ಬಸ್ ವ್ಯವಸ್ಥೆ ಮಾಡಬೇಕು. ವಿವಿಧ ಸಂಘಟನೆಗಳು ಮುಖಂಡರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಶಾಸಕಿ ಕರೆಮ್ಮ ಜಿ.ನಾಯಕ ಎಲ್ಲರನ್ನು ಸಮಾಧಾನಿಸಿ ದೂರುಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ತಿಳಿಸಿದರು.