ಸಿಂಧನೂರಿನಲ್ಲಿ ಮಂಗಳವಾರ ನಿರ್ಮಲ ತುಂಗಭದ್ರಾ ಅಭಿಯಾನ 3ನೇ ಹಂತದ ಜಲ ಜಾಗೃತಿ-ಜನ ಜಾಗೃತಿ ಪಾದಯಾತ್ರೆಯ ಬಹಿರಂಗ ಸಭೆಯನ್ನು ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಿದರು. 
ರಾಯಚೂರು

ನದಿಗಳ ಸಂರಕ್ಷಣೆಗೆ ಯುವಜನತೆ ಪಣ ತೊಡಲಿ

ಪ್ರಮುಖ ಮುಖ್ಯಾಂಶಗಳು

  • ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಸಲಹೆ
  • ಸಿಂಧನೂರಿನಲ್ಲಿ ಬಹಿರಂಗ ಸಭೆ
ನದಿಗಳ ಸಂರಕ್ಷಣೆಗೆ ಯುವಜನತೆ ಪಣ ತೊಡಲಿ Let the youth be involved in the conservation of rivers
ಸಿಂಧನೂರು: ಮನುಷ್ಯನ ಬದುಕು, ಪ್ರಕೃತಿ ಉಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ನದಿಗಳನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡ ಆಪತ್ತು ಎದುರಾಗಲಿದೆ. ಯುವಜನರು ನದಿಗಳ ಸಂರಕ್ಷಣೆಗೆ ಪಣ ತೊಡುವ ಮಹತ್ತರ ಜವಾಬ್ದಾರಿ ಹೊರಬೇಕೆಂದು ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು. 
ನಗರದ ಸತ್ಯಗಾರ್ಡನ್‌ನಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ, ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಹಾಗೂ ಪರ್ಯಾವರಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಿರ್ಮಲ ತುಂಗಭದ್ರಾ ಅಭಿಯಾನ 3ನೇ ಹಂತದ ಜಲ ಜಾಗೃತಿ-ಜನ ಜಾಗೃತಿ ಪಾದಯಾತ್ರೆಯ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು. 
ದೇಶ, ರಾಜ್ಯದ ನದಿಗಳು ಶಾಶ್ವತವಾಗಿ ಉಳಿಸಬೇಕೆಂಬ ಆತ್ಮ ಜಾಗೃತವಾದರೆ ಮಾತ್ರ ನದಿಗಳಿಗೆ ಜೀವಂತಿಕೆ ಬರಲಿದೆ. ಎಷ್ಟೋ ನದಿಗಳು ಬತ್ತಿ ಹೋಗಿವೆ ಎನ್ನುವುದಕ್ಕಿಂತ ನಮ್ಮಿಂದ ಕಳೆದು ಹೋಗಿವೆ ಎಂದರೆ ತಪ್ಪಾಗದು. ಬದಲಾವಣೆ ಮೊದಲು ನಮ್ಮಿಂದಾಗಬೇಕೆಂಬ ಆತ್ಮ ಜಾಗೃತಗೊಳ್ಳುವ ಕೆಲಸ ನಡೆಯಬೇಕಿದೆ. ಅದು ವಿದ್ಯಾರ್ಥಿಗಳು, ಯುವ ಜನರಿಂದ ಸಾಧ್ಯವಾಗಲಿದೆ ಎಂದರು.
ಧಾರವಾಡ ಐಐಟಿಯ ಸಂದರ್ಶಕ ಪ್ರಾಧ್ಯಾಪಕ ಎಲ್.ಕೆ.ಶ್ರೀಪತಿ ಮಾತನಾಡಿ, ನದಿಗಳು ಅತಿ ಮಾಲಿನ್ಯಕ್ಕೊಳಗಾಗಿವೆ. ಅವುಗಳ ಸಂರಕ್ಷಣೆ ನಮ್ಮ ಮುಂದಿರುವ ಸವಾಲಾಗಿದೆ. ಮನುಷ್ಯ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವುದಕ್ಕೂ ನದಿಗಳ ಮಲಿನತೆಯೇ ಕಾರಣ ಎನ್ನುವುದು ಅರಿಯಬೇಕಿದೆ ಎಂದರು. 
ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪುರ, ಆರ್ಥಿಕ ತಜ್ಞ ಬಿ.ಎಂ.ಕುಮಾರಸ್ವಾಮಿ ಮಾತನಾಡಿದರು. ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ನರಗುಂದದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಬಂಗಾರಿಕ್ಯಾಂಪ್‌ನ ಸದಾನಂದ ಶರಣರು, ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ರಾಜೇಶ ಹಿರೇಮಠ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಇತರರಿದ್ದರು. 

ವಿದ್ಯಾರ್ಥಿಗಳು ಭಾಗಿ

ಸಿಂಧನೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಪಾದಯಾತ್ರೆಯು ಎಪಿಎಂಸಿಯ ಶ್ರೀ ಗಣೇಶ ದೇವಸ್ಥಾನದಿಂದ ಸತ್ಯಗಾರ್ಡನ್‌ವರೆಗೆ ನಡೆಯಿತು. ಸ್ವಾಮೀಜಿಗಳು, ಜನಪ್ರತಿನಿಧಿಗಳು, ವ್ಯಾಪಾರಿಗಳು, ಉದ್ಯಮಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು, ಉಪನ್ಯಾಸಕರು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಭಾಗವಹಿಸಿದ್ದರು.