ಎಚ್.ವೀರಭದ್ರಪ್ಪ 
ರಾಯಚೂರು

ಶಾಶ್ವತ ನ್ಯಾಯಪೀಠ ಮಂಜೂರು ಮಾಡಲಿ

ಮಸ್ಕಿ: ಪಟ್ಟಣದಲ್ಲಿ ಶಾಶ್ವತ ನ್ಯಾಯಪೀಠ ಸ್ಥಾಪಿಸಬೇಕೆಂದು ವಕೀಲರ ಸಂಘದ ಅಧ್ಯಕ್ಷ ಎಚ್.ವೀರಭದ್ರಪ್ಪ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿದರು. ವಾರದಲ್ಲಿ ಗುರುವಾರ ಮತ್ತು ಶುಕ್ರವಾರ ಮಾತ್ರ ಸಂಚಾರಿ ನ್ಯಾಯಪೀಠ ಕೆಲಸ ಮಾಡುತ್ತಿದೆ. ಇದರಿಂದ ಬಹಳಷ್ಟು ಕಕ್ಷಿದಾರರಿಗೆ ತೊಂದರೆಯಾಗುತ್ತದೆ. ಶಾಶ್ವತ ಪೀಠ ಸ್ಥಾಪನೆ ಮಾಡಿದರೆ ಅನುಕೂಲವಾಗುತ್ತದೆ ಎಂದರು. ಶಾಶ್ವತ ಪೀಠಕ್ಕಾಗಿ ಸರ್ಕಾರಕ್ಕೆ ಶಾಸಕರ ಮುಖಾಂತರ ಹಲವು ಸಲ ಮನವಿ ಮಾಡಲಾಗಿದೆ. ಈ ಬಾರಿ ಕೊಪ್ಪಳ ಜಿಲ್ಲೆಯ ಕಾರಟಗಿ ಮತ್ತು ಕೂಕನೂರಿನಲ್ಲಿ ಸೌಕರ್ಯಗಳ ಕೊರತೆ ಮಧ್ಯೆ ಶಾಶ್ವತ ಪೀಠಕ್ಕೆ ಮಂಜೂರಾತಿ ನೀಡಲಾಗಿದೆ. 
ಮಸ್ಕಿ ನ್ಯಾಯಲಯದಲ್ಲಿ ಮೂಲಸೌಕರ್ಯಗಳಿದ್ದು, ಎಲ್ಲ ರೀತಿಯಿಂದ ಅನುಕೂಲವಿದೆ. ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಇದರಿಂದಾಗಿ ಕಕ್ಷಿದಾರರು ಮತ್ತು ವಕೀಲರಿಗೂ ತೊಂದರೆಯಾಗುತ್ತಿದ್ದು, ಕೂಡಲೇ ಮಸ್ಕಿಯ ಸಂಚಾರಿ ಪೀಠವನ್ನು ಶಾಶ್ವತ ಪೀಠವೆಂದು ಘೋಷಣೆ ಮಾಡುವಂತೆ ಶಾಸಕ ಆರ್.ಬಸನಗೌಡ ತುರ್ವಿಹಾಳ ನೇತೃತ್ವದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ. 
ಬೇಡಿಕೆ ಈಡೇರಿಸದಿದ್ದರೆ ಕಲಾಪದಿಂದ ದೂರ ಉಳಿದು ಧರಣಿ ನಡೆಸುವುದಾಗಿ ಎಚ್.ವೀರಭದ್ರಪ್ಪ ತಿಳಿಸಿದರು. ಸಂಘದ ಉಪಾಧ್ಯಕ್ಷ ಅಮರೇಗೌಡ, ಕೋಶಾಧ್ಯಕ್ಷ ರಾಮಣ್ಣ ಬೆಳಿಗನೂರು, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ನಾಗರಬೆಂಚಿ, ವಕೀಲರಾದ ರಾಮಣ್ಣ ನಾಯಕ, ಪಂಪನಗೌಡ ಪಾಟೀಲ್, ಬಸವರಾಜ, ನಬಿ ಶೇಡ್ಮಿ, ಚನ್ನಪ್ಪ ನಾಗಲದಿನ್ನಿ ಇತರರಿದ್ದರು.