ಸಿಂಧನೂರು ತಹಸಿಲ್ ಕಚೇರಿಯಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್(ಎಐಡಿವೈಒ) ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಯಿತು. ಸಮಿತಿ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಉಪನ್ಯಾಸಕರಾದ ಶಂಕರ್ ಗುರಿಕಾರ, ವಕೀಲ ಭೀಮರಾಯ, ಪ್ರಮುಖರಾದ ವಿನೋದಕುಮಾರ, ನಾಗರಾಜ, ವೆಂಕಟೇಶ, ರಾಘವೇಂದ್ರ ಇದ್ದರು. 
ರಾಯಚೂರು

ಉದ್ಯೋಗ ನೇಮಕ ಪಾರದರ್ಶಕವಾಗಿರಲಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಎಐಡಿವೈಒ
  • ಒತ್ತಾಯ
  • ಹುದ್ದೆ
ಸಿಂಧನೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸುವುದು ಹಾಗೂ ಭ್ರಷ್ಟಾಚಾರ ತಡೆಗೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್(ಎಐಡಿವೈಒ) ಅಖಿಲ ಭಾರತ ಸಮಿತಿ ಕರೆ ಮೇರೆಗೆ ತಹಸಿಲ್ ಕಚೇರಿಯಲ್ಲಿ ಸೋಮವಾರ ಸಹಿ ಸಂಗ್ರಹ ಅಭಿಯಾನ ನಡೆಯಿತು.
ಕೇಂದ್ರ ಸರ್ಕಾರದ 78 ಇಲಾಖೆಗಳಲ್ಲಿ ಖಾಲಿ ಇರುವ 9.79 ಲಕ್ಷ ಹುದ್ದೆ ಹಾಗೂ ರಾಜ್ಯದ 43 ಇಲಾಖೆಗಳಲ್ಲಿನ 2.85 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು. ಎಲ್ಲ ನೇಮಕಾತಿಗಳ ವಯೋಮಿತಿಯನ್ನು ಕನಿಷ್ಠ 5ವರ್ಷ ಹೆಚ್ಚಿಸಬೇಕು. ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಬೇಕು. 
ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು. ನೇಮಕಾತಿಯ ಅರ್ಜಿ ಶುಲ್ಕವನ್ನು ಸಂಪೂರ್ಣವಾಗಿ ಕೈಬಿಡಬೇಕು ಹಾಗೂ ನೇಮಕಾತಿ ಪರೀಕ್ಷೆಗಳಿಗೆ ಪರೀಕ್ಷಾರ್ಥಿಗಳು ಹಾಜರಾಗಲು ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕು. ಖಾಲಿ ಇರುವ ಚಿತ್ರಕಲಾ, ಸಂಗೀತ, ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಇನ್ನು ಮುಂತಾದ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಸಹಿಸಂಗ್ರಹ ಅಭಿಯಾನ ನಡೆಸಲಾಯಿತು.
ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿದ ವಿವಿಧ ಪಕ್ಷಗಳ ಸರ್ಕಾರಗಳು ಯುವಜನರನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿವೆ. ಅವರ ಬಗ್ಗೆ ಯಾವುದೇ ಕಾಳಜಿಯನ್ನು ವಹಿಸುತ್ತಿಲ್ಲ. ಉದ್ಯೋಗಗಳನ್ನು ಕೊಡುತ್ತಿಲ್ಲ. ಗುತ್ತಿಗೆ ಹೊರಗುತ್ತಿಗೆ ಅತಿಥಿ ಶಿಕ್ಷಕರ ಹೆಸರಿನಲ್ಲಿ ಗೌರವದಿಂದ ಬದುಕಲು ಸಾಧ್ಯವಿಲ್ಲದ ವೇತನದಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.