ದೇವದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಆರೋಗ್ಯ ಜಾಗೃತಿಗಾಗಿ ಬೀದಿನಾಟಕ ಪ್ರದರ್ಶನಕ್ಕೆ ವೈದ್ಯಾಧಿಕಾರಿ ನಾಗರಾಜ ಚಾಲನೆ ನೀಡಿದರು.ವೈದ್ಯಾಧಿಕಾರಿ ನಿರ್ಮಲಾದೇವಿ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಸೋಮಪ್ಪ, ಚನ್ನಬಸವಯ್ಯ ಹಿರೇಮಠ, ಫಾರ್ಮಸಿ ಅಧಿಕಾರಿ ಜಯಕುಮಾರ ಇತರರಿದ್ದರು.
- ವೈದ್ಯಾಧಿಕಾರಿ ಡಾ.ನಾಗರಾಜ ಸಲಹೆ
ದೇವದುರ್ಗ: ಬಡವರು, ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಜನರು ಮಾಹಿತಿ ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ನಾಗರಾಜ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಶೃತಿ ಸಾಂಸ್ಕೃತಿಕ ತಂಡದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆಯೋಜಿಸಿದ್ದ ಆರೋಗ್ಯ ಜಾಗೃತಿಗಾಗಿ ಬೀದಿನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.
ಸರ್ಕಾರ ವಿವಿಧ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಯೋಜನೆಗಳ ಬಗ್ಗೆ ಮಾಹಿತಿ ಕೊರತೆಯಿಂದ ಫಲಾನುಭವಿಗಳಿಗೆ ಸೇವೆಗಳು ಸಿಗುತ್ತಿಲ್ಲ. ಯೋಜನೆಗಳ ಮಾಹಿತಿ ನೀಡುವ ಜತೆಗೆ ಜಾಗೃತಿ ಮೂಡಿಸಲು ಬೀದಿನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವೈಯಕ್ತಿಕ ಶೌಚಗೃಹ ಬಳಕೆ, ಸುರಕ್ಷಿತ ಹೆರಿಗೆಗಾಗಿ ನಗು-ಮಗು ವಾಹನ ಸೌಲಭ್ಯ, 108 ಆಂಬುಲೆನ್ಸ್ ಸೇವೆ, ತಾಯಿಹಾಲಿನ ಮಹತ್ವ, ಲಸಿಕೆಗಳು, ಹದಿಹರೆಯದವರ ಆರೋಗ್ಯ ಸಮಸ್ಯೆಗಳು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ದಂತ ಭಾಗ್ಯದಡಿ ಹಲ್ಲಿನ ಸೆಟ್ ಅಳವಡಿಕೆ, ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ, ಹೃದಯ ಆರೈಕೆಗಾಗಿ ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ, ಕಿಡ್ನಿ ಆರೈಕೆಗೆ ಡಯಾಲಿಸಿಸ್ ಸೇವೆ, ಭ್ರೂಣ ಲಿಂಗಪತ್ತೆ ನಿಷೇಧ ಕಾಯ್ದೆಯಡಿ ದಂಡ ಜೈಲು ಶಿಕ್ಷೆ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಾಮಪ್ಪ, ಶರಣಪ್ಪ ರಾಂಪುರ, ಚಾಂದಬೀ ಇಟಗಿ, ಇಮಾಮ್ ಅಲಿ, ಮನೋಜ ಕುಮಾರ, ಕರಗುಳಿ ಆಂಜನೇಯ, ಬಸಪ್ಪ ಮಾಶೆಟ್ಟಿ, ಲಕ್ಷ್ಮೀ ಇತರರಿದ್ದರು.