ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಪೂವಿತಾರಿ ಎಸ್. ಅವರಿಗೆ ರೈತರು ಮನವಿ ಸಲ್ಲಿಸಿದರು.
ಸಿಂಧನೂರು: ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಕಲ್ಮಂಗಿ ಹಾಗೂ ಉಮಲೂಟಿ ಗ್ರಾಪಂ ವ್ಯಾಪ್ತಿ ಪ್ರದೇಶವನ್ನು ಬರ ಪಟ್ಟಿಗೆ ಸೇರಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಪೂವಿತಾರಿ ಎಸ್.ಅವರಿಗೆ ರೈತರು ಮಂಗಳವಾರ ಮನವಿ ಸಲ್ಲಿಸಿದರು.
ರೈತರು ತೊಗರಿ, ಸೂರ್ಯಕಾಂತಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಮಳೆ ಬಾರದೆ ತೇವಾಂಶ ಕೊರತೆಯಾಗಿ ಬೆಳೆಗಳು ಒಣಗುತ್ತಿವೆ. ಇದರಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ಮೇವು ಮತ್ತು ಕುಡಿವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಯಿದ್ದು, ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ಬೆಳೆ ಹಾನಿ ಕುರಿತು ಜಿಪಿಎಸ್ ಆಧಾರಿತ ಬೆಳೆ ಸಮೀಕ್ಷೆ ನಡೆಸಿ ಅರ್ಹ ರೈತರಿಗೆ ಪರಿಹಾರ ಮತ್ತು ಬೆಳೆ ವಿಮೆಯನ್ನು ತ್ವರಿತವಾಗಿ ಮಂಜೂರು ಮಾಡಬೇಕು. ಸರ್ಕಾರದ ವಿವಿಧ ಯೋಜನೆಗಳ ನೆರವನ್ನು ರೈತರಿಗೆ ತಲುಪಿಸಬೇಕು. ಜಾನುವಾರುಗಳಿಗೆ ಮೇವು-ಕುಡಿವ ನೀರು ಒದಗಿಸಬೇಕು. ರೈತರ ಸಂಕಷ್ಟ ನಿವಾರಣೆಗೆ ಬರ ಪರಿಹಾರ ಪ್ಯಾಕೇಜ್ ಒದಗಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ಕರುನಾಡ ಹಸಿರು ಸೇನೆ ಸಂಘದ ಅಧ್ಯಕ್ಷ ಬಸವಂತರಾಯ ಕುಲಕರ್ಣಿ, ಕಾರ್ಯದರ್ಶಿ ಬಸವರಾಜ ಕುಲಕರ್ಣಿ, ವೀರೇಶ ಕೃಷ್ಣಾಪುರ, ಶರಣಬಸವ ಮುಂದಲಮನಿ, ನೀಲಪ್ಪ ತಾವರಗೇರಾ, ನಾಗಪ್ಪ ಗುಂತಮಡಗ, ರೈತ ಉತ್ಪಾದಕರ ಸಂಘದ ಉಪಾಧ್ಯಕ್ಷ ಚನ್ನನಗೌಡ ಬೇರ‌್ಗಿ, ಬಸನಗೌಡ ಹಳೆಮನಿ, ಶಿವಬಸಪ್ಪ ಗುಡದೂರ, ಸುರೇಶ ಹೊಸಮನಿ, ಬಸವರಾಜಗೌಡ ಸಿಂಧನೂರ, ಸಂಗನಗೌಡ ಹತ್ತಿಗುಡ್ಡ. ರವಿಕುಮಾರ ಹತ್ತಿಗುಡ್ಡ, ಗೋವಿಂದಪ್ಪ ಹಿರೇಬೇರ‌್ಗಿ ಇದ್ದರು.