ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಎಸ್. ಕಮಲ ಕುಮಾರ ಜೈನ್  
ರಾಯಚೂರು

ನಗರದಲ್ಲಿ ರಿಂಗ್‌ರೋಡ್ ನಿರ್ಮಾಣ ಮಾಡಲಿ

ರಾಯಚೂರು ನಗರದಲ್ಲಿ ರಸ್ತೆ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚು ತ್ತಿದ್ದು, ಕೂಡಲೇ ನಗರದಲ್ಲಿ ರಿಂಗ್‌ರೋಡ್ ನಿರ್ಮಾಣ ಮಾಡಬೇಕು. ಶಕ್ತಿನಗರದಿಂದ ಗಂಜ್ ವೃತ್ತದವರೆಗೆ ನಾಲ್ಕು ಪಥದ ರಸ್ತೆ ಅಭಿವೃದ್ಧಿಪಡಿಸಬೇಕೆಂದು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಎಸ್. ಕಮಲ ಕುಮಾರ ಜೈನ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಒಟ್ಟು 2,636 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 886 ಸಾವುಗಳು ಸಂಭವಿಸಿವೆ. ರಾಯಚೂರು ಅಪಘಾತಗಳ ನಗರವಾಗುತ್ತಿದ್ದು, ಸಾರ್ವಜನಿಕರ ಜೀವಕ್ಕೆ ಗಂಭೀರ ಅಪಾಯ ಎದುರಾಗಿದೆ ಎಂದರು.
ರಾಯಚೂರು ಐದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಸಂಗಮಿಸುವ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಹೊರ ವರ್ತುಲ ರಸ್ತೆ ಕೊರತೆಯಿಂದ ಭಾರೀ ಸರಕು ಸಾಗಣೆ ವಾಹನಗಳು ನಗರ ಮಧ್ಯಭಾಗದಲ್ಲಿ ಸಂಚರಿಸುತ್ತಿವೆ. ಇದರಿಂದ ಸ್ಥಳೀಯ ಸಂಚಾರಕ್ಕೆ ತೊಂದರೆ ಉಂಟಾಗಿ ಅಪಘಾತಗಳು ಹೆಚ್ಚುತ್ತಿರುವುದಾಗಿ ತಿಳಿಸಿದರು. ಶಕ್ತಿನಗರದಿಂದ ಗಂಜ್ ವೃತ್ತದವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಅತ್ಯಗತ್ಯವಾಗಿದೆ.
7ನೇ ಮೈಲಿಯಿಂದ ರಾಯಚೂರು, ಶಕ್ತಿನಗರ ರಾಯಚೂರು, ಯರಗೇರಾ ರಾಯಚೂರು ಮತ್ತು ಗಂಜ್ ವೃತ್ತದಿಂದ ಸ್ಟೇಷನ್ ರಸ್ತೆವರೆಗೆ ಅಪಘಾತ ಪ್ರಮಾಣ ಹೆಚ್ಚಿದ್ದು, ಪಾದಚಾರಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ವೈ. ಜಂಬಣ್ಣ, ಹರವಿ ನಾಗನಗೌಡ, ಸಿದ್ದನಗೌಡ, ಮಲ್ಲಿಕಾರ್ಜುನ ದೋತರಬಂಡಿ, ಮೈಲಾಪುರ ಮೂರ್ತಿ, ವಸಂತ ಪತಂಗೆ ಇದ್ದರು.