ರಾಯಚೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂತೃಪ್ತ ವೃದ್ಧಾಪ್ಯಕ್ಕಾಗಿ ಧ್ಯಾನ ಹಾಗೂ ಹಿರಿಯ ನಾಗರಿಕರಿಗೆ ಕಾನೂನು ಜಾಗೃತಿ ಕಾರ್ಯಕ್ರಮವನ್ನು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಸರಸ್ವತಿ ಉದ್ಘಾಟಿಸಿದರು. ಸಹಾಯವಾಣಿ ಕೇಂದ್ರದ ಮುಖ್ಯಸ್ಥ ಪವನ್ ಕಿಶೋರ ಪಾಟೀಲ್, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಸ್ಮಿತಾ ಅಕ್ಕ, ಕರ್ನಾಟಕ ಹಿರಿಯ ನಾಗರಿಕರ ಸಂಘದ ರಾಜ್ಯಾಧ್ಯಕ್ಷ ಎ.ವೈ. ಬೆಂಡಿಗೇರಿ, ಅಖಿಲ ಭಾರತ ಹಿರಿಯ ನಾಗರಿಕರ ಮಹಾ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಎಂ.ವಿ.ಹಿರೆಮಠ, ಪ್ರಮುಖರಾದ ಮಲ್ಲಪ್ಪ ಮದಕವಿ, ಬಸವರಾಜ, ಮಹಾದೇವಪ್ಪ ಏಗನೂರು, ವೀರಭದ್ರಪ್ಪ ಇದ್ದರು.
- ಹಿರಿಯರು ಸರ್ಕಾರದ ಸೌಲಭ್ಯ ಪಡೆಯಿರಿ
ರಾಯಚೂರು ಹಿರಿಯ ನಾಗರಿಕರು ಇಲಾಖೆಯ ಮಾರ್ಗದರ್ಶನವನ್ನು ಪಡೆದುಕೊಂಡು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಸರಸ್ವತಿ ಹೇಳಿದರು.
ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಸುರಕ್ಷಾ ಸಂಸ್ಥೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂತೃಪ್ತ ವೃದ್ಧಾಪ್ಯಕ್ಕಾಗಿ ಧ್ಯಾನ ಹಾಗೂ ಹಿರಿಯ ನಾಗರಿಕರಿಗೆ ಕಾನೂನು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ವೆಜೀವನಶೈಲಿಯಲ್ಲಿ ಹಿರಿಯ ನಾಗರಿಕರು ಆರೋಗ್ಯ ಸಮಸ್ಯೆಗಳು,
ಕುಟುಂಬದ ನಿರ್ಲಕ್ಷ್ಯ, ಮಾನಸಿಕ ಒತ್ತಡ ಮತ್ತು ಸಾಮಾಜಿಕ ಏಕಾಂಗಿತನದಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜಾರಿಗೊಳಿಸಿರುವ ಕಾನೂನುಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಹಿರಿಯರ ಅನುಭವ ಮತ್ತು ಮಾರ್ಗದರ್ಶನ ಸಮಾಜದ ಅಮೂಲ್ಯ ಸಂಪತ್ತಾಗಿದ್ದು, ಅವರನ್ನು ಗೌರವದಿಂದ ಕಾಣುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದರು.
ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಮುಖ್ಯಸ್ಥ ಪವನ್ ಕಿಶೋರ ಪಾಟೀಲ್ ಮಾತನಾಡಿ, ಇಂದಿನ ದಿನಮಾನದಲ್ಲಿ ಹಿರಿಯ ನಾಗರಿಕರು ಆರೋಗ್ಯ, ಕುಟುಂಬ ಹಾಗೂ ಕಾನೂನು ಸಂಬಂಧಿತ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಿರಿಯ ನಾಗರಿಕರ ಪಾಲನೆ, ಪೋಷಣೆ ಮತ್ತು ರಕ್ಷಣೆಗಾಗಿ ಕೇಂದ್ರ ಸರ್ಕಾರವು 2007ರಲ್ಲಿ ಕಾಯ್ದೆ ಜಾರಿಗೆ ತಂದಿದ್ದು, ಅದರಡಿ ಹಿರಿಯರಿಗೆ ವಿವಿಧ ರೀತಿಯ ಕಾನೂನುಬದ್ಧ ರಕ್ಷಣೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಸ್ಮಿತಾ ಮಾತನಾಡಿ, ವೃದ್ಧಾಪ್ಯವು ಜೀವನದ ಅತ್ಯಂತ
ಅಮೂಲ್ಯ ಹಂತವಾಗಿದ್ದು, ಅದನ್ನು ನೆಮ್ಮದಿ, ಸಂತೃಪ್ತಿ ಮತ್ತು ಆತ್ಮವಿಶ್ವಾಸದಿಂದ ಕಳೆಯುವ ಮನೋಭಾವ
ಬೆಳೆಸಿಕೊಳ್ಳಬೇಕಾಗಿದೆ. 60 ವರ್ಷಗಳ ನಂತರ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಚಿಂತನೆಗಳು ಸಹಜವಾಗಿ ಮೂಡುತ್ತವೆ. ಈ ಅವಧಿಯಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯಕ್ಕೂ ಸಮಾನ ಮಹತ್ವ ನೀಡಬೇಕಾಗಿದೆ. ಧ್ಯಾನವು ಮನಸ್ಸಿಗೆ ಶಾಂತಿ ನೀಡುವುದರ ಜೊತೆಗೆ ಆತಂಕ, ಏಕಾಂಗಿತನ ಮತ್ತು ಒತ್ತಡವನ್ನು ಕಡಿಮೆ ಮಾಡಿ ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಹಿರಿಯ ನಾಗರಿಕರ ಸಂಘದ ರಾಜ್ಯಾಧ್ಯಕ್ಷ ಎ.ವೈ. ಬೆಂಡಿಗೇರಿ, ಅಖಿಲ ಭಾರತ ಹಿರಿಯ ನಾಗರಿಕರ ಮಹಾ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಎಂ.ವಿ.ಹಿರೆಮಠ, ಪ್ರಮುಖರಾದ ಮಲ್ಲಪ್ಪ ಮದಕವಿ, ಬಸವರಾಜ, ಮಹಾದೇವಪ್ಪ ಏಗನೂರು, ವೀರಭದ್ರಪ್ಪ ಸೇರಿದಂತೆ ಅನೇಕರು ಇದ್ದರು.