ಸಿಂಧನೂರು ತಾಲೂಕಿನ ಅರಗಿನಮರಕ್ಯಾಂಪ್ ಪುನರ್ವಸತಿ ಕೇಂದ್ರದಲ್ಲಿ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆ ವಿತರಿಸಲಾಯಿತು.
ಸಿಂಧನೂರು: ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಮೇಲೆ ಜಂತುಹುಳು ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಹೇಳಿದರು.
ಅರಗಿನಮರಕ್ಯಾಂಪ್ ಪುನರ್ವಸತಿ ಕೇಂದ್ರದಲ್ಲಿ ಜಂತುಹುಳು ನಿವಾರಣೆ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಜಂತುಹುಳುಗಳಿಂದ ರಕ್ತಹೀನತೆ, ಅಪೌಷ್ಟಿಕತೆಯೊಂದಿಗೆ ಕಲಿಕಾ ಸಾಮರ್ಥ್ಯ ಕುಂಠಿತವಾಗುವಂಥ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಪ್ರತಿ ಮಗುವಿಗೂ ಜಂತುಹುಳು ನಿವಾರಣೆ ಮಾತ್ರೆ ನೀಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ ಆದಿಲಕ್ಷ್ಮೀ ಮಾತನಾಡಿ, ಮಕ್ಕಳಲ್ಲಿ ಜಂತುಹುಳು ಸೋಂಕು ತಡೆಗಟ್ಟಲು ವೈಯಕ್ತಿಕ ಸ್ವಚ್ಛತೆ ಕಾಪಾಡುವುದು, ಶುದ್ಧ ಕುಡಿಯುವ ನೀರು ಬಳಸುವುದು, ಆಹಾರ ಸೇವಿಸುವ ಮೊದಲು ಕೈಗಳನ್ನು ತೊಳೆಯುವುದು ಹಾಗೂ ಶೌಚಗೃಹ ಬಳಸುವ ಅಭ್ಯಾಸ ಬೆಳೆಸುವುದು ಅಗತ್ಯ. ಮಾತ್ರೆ ಸೇವನೆಯಿಂದ ಮಕ್ಕಳ ಆರೋಗ್ಯ ಸುಧಾರಿಸಿ ಉತ್ತಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ಮಾತನಾಡಿ, ಮಕ್ಕಳ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಇಲಾಖೆ ಹಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು. ಆಶಾ ಕಾರ್ಯಕರ್ತೆ ಲಕ್ಷ್ಮೀ, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.