ಹೈದ್ರಾಬಾದ ಕರ್ನಾಟಕ ಜನಾಂದೋಲನ ಕೇಂದ್ರ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ 
ರಾಯಚೂರು

ಕೆಕೆಆರ್‌ಡಿಬಿ ಅನುದಾನ ಬಳಕೆಯಲ್ಲಿ ವಿಫಲ ಮೇ.24 ರಂದು ನಗರದಲ್ಲಿ ಸಮಾವೇಶ

ರಾಯಚೂರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಈ ಭಾಗದ ಅಭಿವೃದ್ಧಿಗೆ ಸಚಿವ, ಶಾಸಕರು ನಿರ್ಲಕ್ಷೃ ವಹಿಸಿದ್ದು, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ ಸಿಂಗ್ ಸ್ಥಾನಕ್ಕೆ ರಾಜೀನಾಮೆ ನೀಡಲು ಒತ್ತಾಯಿಸಿ ಮೇ.24 ರಂದು ನಗರದಲ್ಲಿ ಜನಾಂದೋಲನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆಂದು ಹೈದ್ರಾಬಾದ ಕರ್ನಾಟಕ ಜನಾಂದೋಲನ ಕೇಂದ್ರ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಭಾಗದ ಹಿಂದುಳುವಿಕೆ ನಿವಾರಿಸಲೆಂದೇ 371(ಜೆ) ಕಾಯ್ದೆ ರೂಪಿಸಲಾಗಿದೆ. ಆದರೆ 2025-26 ಸಾಲಿನಲ್ಲಿ 5 ಸಾವಿರ ಕೋಟಿ ರೂ ಅನುದಾನದಲ್ಲಿ ಮಂಡಳಿ 862.93 ಕೋಟಿ ರೂ ಮಾತ್ರ ಕ್ರಿಯಾಯೋಜನೆಗೆ ಅನುಮೋದನೆ ಪಡೆದಿದೆ. ಲಭ್ಯವಿರುವ ಅನುದಾನ ಬಳಕೆ ಮಾಡಿಕೊಳ್ಳದೇ ನಿರ್ಲಕ್ಷ್ಯ ಎದ್ದುಕಾಣುತ್ತಲಿದೆ. ಮಂಡಳಿ ಅಧ್ಯಕ್ಷರಾಗಿರುವ ಅಜಯಸಿಂಗ್ ರಾಜೀನಾಮೆ ನೀಡಬೇಕು. ಮಂಡಳಿಗೆ ಪ್ರತ್ಯೇಕ ಕಾರ್ಯದರ್ಶಿಯನ್ನು ನೇಮಿಸಲಾಗಿದೆ. ಆದರೂ ಸಕಾಲದಲ್ಲಿ ಕ್ರಿಯಾಯೋಜನೆ ರೂಪಿಸಿ ಅನುದಾನ ಬಳಕೆ ಮಾಡುವಲ್ಲಿ ನಲಿನ್ ಅತುಲ್ ವಿಫಲವಾಗಿದ್ದಾರೆಂದು ಆರೋಪಿಸಿದರು.
371(ಜೆ) ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರಾಗಿರುವ ಪ್ರಿಯಾಂಕ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್, ಎನ್.ಎಸ್.ಬೋಸರಾಜ, ತಂಗಡಗಿ ಸೇರಿದಂತೆ ಸಚಿವರುಗಳು, ಕೆಕೆಆರ್‌ಡಿಬಿ ಮಂಡಳಿ ಸದಸ್ಯರುಗಳು ಪ್ರಶ್ನಿಸದೇ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಆಡಳಿತ ಶಾಸಕರು, ಸಚಿವರೊಂದಿಗೆ ಬಿಜೆಪಿ, ಜೆಡಿಎಸ್ ಶಾಸಕರುಗಳು ಸಹ ಮೌನವಾಗಿರುವದು ವಿಪರ್ಯಾಸ ಎಂದರು.
ರಾಜಕೀಯ ಪಕ್ಷಗಳ ಬದ್ಧತೆಯ ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿರುವದ ವಿರೋಧ ಬಲಿಷ್ಟ ಹೋರಾಟ ರೂಪಿಸಲು ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಕಲ್ಯಾಣ ಕರ್ನಾಟಕ ಎಲ್ಲಾ ಜಿಲ್ಲೆಗಳ ಪ್ರಮುಖ ಹೋರಾಟಗಾರರು, ಸಂಘಟನೆಗಳೊಂದಿಗೆ ಒಗ್ಗೂಡಿ ಹೋರಾಟ ರೂಪಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜಾನವೆಸ್ಲಿ, ಖಾಜಾ ಅಸ್ಲಂ, ಬಿ.ಬಸವರಾಜ, ಈರಣ್ಣ ಭಂಡಾರಿ, ಭೀಮರಾಯ ಜೇರದಬಂಡಿ, ಆರ್.ಬಸವರಾಜ ಇದ್ದರು.