ಶಿವರಾಜ 
ರಾಯಚೂರು

ಖಾಸಗಿ ಶಾಲೆಗಳಲ್ಲಿ ಕನ್ನಡ ಕಡೆಗಣನೆ

ನರೇಶ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ದೇವದುರ್ಗ ಕಸಾಪ ತಾಲೂಕು ಅಧ್ಯಕ್ಷ ಶಿವರಾಜ ಆರೋಪ
ದೇವದುರ್ಗ: ಪಟ್ಟಣದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡ ಪಠ್ಯ ಬೋಧನೆ ಕಡೆಗಣಿಸಲಾಗಿದೆ. ಕನ್ನಡ ಕಲಿಕೆ ಕಡ್ಡಾಯವಿದ್ದರೂ ಸಂಸ್ಥೆಗಳು ಸರ್ಕಾರದ ಆದೇಶ ಪಾಲಿಸುತ್ತಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಆರೋಪಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಟ್ಟಣ ಸೇರಿ ತಾಲೂಕಿನ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ಬೋಧನೆಯನ್ನು ಮರೆತಿವೆ. 
ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮ ಅತಿಯಾದ ಬೋಧನೆ ಮಾಡಿ ಪಾಲಕರ ಮನವೊಲಿಸುವ ಮೂಲಕ ಹಣಗಳಿಸಲು ಮುಂದಾಗಿವೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆ ಹಾಗೂ ಬೋಧನೆ ಕಡ್ಡಾಯವಾಗಿ ಕಲಿಸಬೇಕು ಎನ್ನುವುದು ಸರ್ಕಾರದ ನಿಯಮವಿದೆ. 
ಆದರೆ, ಬಹುತೇಕ ಸಂಸ್ಥೆಗಳು ಕನ್ನಡವನ್ನೇ ಮರೆತಿವೆ. 1ರಿಂದ 10ನೇ ತರಗತಿ ಮಕ್ಕಳಿಗೆ ಕನ್ನಡ ಓದಲು ಮತ್ತು ಬರೆಯಲು ಬಾರದಂತ ವಾತಾವರಣ ಸೃಷ್ಟಿಯಾಗಿದೆ. ಶಿಕ್ಷಣ ಇಲಾಖೆ ಕಂಡರೂ ಕಾಣದಂತೆ ಜಾಣ ನಡೆ ಅನುಸರಿಸುತ್ತಿದೆ ಎಂದು ದೂರಿದರು.
ಕೂಡಲೇ ಶಿಕ್ಷಣ ಇಲಾಖೆ ಮೇಲಧಿಕಾರಿಗಳು ಖಾಸಗಿ ಶಾಲೆಗಳಿಗೆ ಭೇಟಿನೀಡಿ ಕನ್ನಡ ಕಲಿಕೆ ಕಡ್ಡಾಯ ಜಾರಿಗೆ ಆದೇಶ ನೀಡಬೇಕು. ಮಕ್ಕಳ ಕನ್ನಡ ಕಲಿಕೆ ಬಗ್ಗೆ ನಿಗಾವಹಿಸಬೇಕು. ನಿಯಮ ಉಲ್ಲಂಘನೆ ಮಾಡುವ ಶಾಲೆಗಳ ಮಾನ್ಯತೆ ರದ್ದು ಮಾಡಿ ಕ್ರಿಮಿನಲ್ ಕೇಸ್ ದಾಖಲಿಸಬೇಕು. ನಿರ್ಲಕ್ಷ್ಯ ಮಾಡಿದರೆ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಮುಖಂಡ ನಾಗರಾಜ ಪಾಟೀಲ್ ಇದ್ದರು.