ಕಿಲ್ಲಾರಹಟ್ಟಿ ಬಳಿ ಕನಕನಾಲಾ ಜಲಾಶಯಕ್ಕೆ ಶಾಸಕ ಬಸನಗೌಡ ತುರ್ವಿಹಾಳ ಬಾಗಿನ ಅರ್ಪಿಸಿದರು. ಮಸ್ಕಿ ತಹಸೀಲ್ದಾರ್ ಮಂಜುನಾಥ ಭೋಗಾವತಿ, ತುರ್ವಿಹಾಳ ಪಪಂ ಅಧ್ಯಕ್ಷ ಬಾಪುಗೌಡ, ಎಪಿಎಂಸಿ ಸಿದ್ಧನಗೌಡ ಮಾಟೂರ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಶೇಖ್ ಮಹೆಬೂಬಸಾಬ್, ಮಸ್ಕಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಸಿದ್ದನಗೌಡ ತುರ್ವಿಹಾಳ, ಆರ್.ಸತೀಶ ಇತರರಿದ್ದರು.
- ಬಾಗಿನ ಅರ್ಪಿಸಿದ ಶಾಸಕ ಬಸನಗೌಡ ತುರ್ವಿಹಾಳ
- ಸಿಂಧನೂರು ಕಿಲ್ಲಾರಹಟ್ಟಿ ಕನಕನಾಲಾ ಜಲಾಶಯ ಭರ್ತಿ
ಸಿಂಧನೂರು: ಕಿಲ್ಲಾರಹಟ್ಟಿ ಹತ್ತಿರ ಇರುವ ಕನಕನಾಲಾ ಜಲಾಶಯ ಅವಧಿಗೂ ಮುನ್ನವೇ ಭರ್ತಿಯಾಗಿದ್ದು, ಶಾಸಕ ಆರ್.ಬಸನಗೌಡ ತುರ್ವಿಹಾಳ ಶನಿವಾರ ಬಾಗಿನ ಅರ್ಪಿಸಿದರು.
ರಾಜ್ಯದಲ್ಲಿ ಮೊದಲ ಬಾರಿಗೆ ನಮ್ಮ ಕನಕನಾಲಾ ಜಲಾಶಯ ತುಂಬಿ ತುಳುಕುತ್ತಿದೆ. ಆದ ಕಾರಣ ಬಾಗಿನ ಸಮರ್ಪಿಸಿ ಕಾಲುವೆಗೆ ನೀರು ಬಿಡುಗಡೆ ಮಾಡಿದ್ದೇವೆ. ಕನಕನಾಲಾ ಜಲಾಶಯ 0.178 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯವಿದ್ದು, ರೈತರು ನೀರನ್ನು ಮಿತವಾಗಿ ಬಳಸಿ, ವ್ಯರ್ಥವಾಗುವುದನ್ನು ತಡೆಯಬೇಕು. ಕನಕನಾಲಾ ಜಲಶಯದ ಮತ್ತಷ್ಟು ಅಭಿವೃದ್ಧಿಗೆ 134 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಹಂತದಲ್ಲಿದೆ. ಜಲಾಶಯದಲ್ಲಿರುವ ಹೂಳು ಮತ್ತು ಪಕ್ಕದಲ್ಲಿರುವ ಗುಡ್ಡ ತೆರವುಗೊಳಿಸಿ, 12 ಕಿಮೀ ಉದ್ದದ ಕಾಲುವೆಯನ್ನೂ ಅಭಿವೃದ್ಧಿ ಪಡಿಸಲಾಗುವುದು. ರೈತರಿಗೆ ಮುಂಗಾರು, ಹಿಂಗಾರು ಬೆಳೆಗಳಿಗೆ ನೀರೊದಗಿಸಲು ನಮ್ಮ ಸರ್ಕಾರ ಚಿಂತನೆ ಮಾಡಿದ್ದು, ಕಾಮಗಾರಿಯನ್ನು ಕೈಗೊಳ್ಳಲು ಬದ್ಧವಾಗಿದೆ ಎಂದು ತಿಳಿಸಿದರು.
ಮಸ್ಕಿ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ಬೆಳೆದು ನಿಂತ ಬೆಳೆಗಳಿಗೆ ನೀರು ಬಿಟ್ಟು ರೈತರ ಹಿತ ಕಾಪಾಡಬೇಕೆಂದು ಬಾಗಿನ ಸಮರ್ಪಣೆ ಕಾರ್ಯ ಹಮ್ಮಿಕೊಂಡಿದ್ದೇವೆ. ಶಾಸಕರ ಇಚ್ಛಾಶಕ್ತಿಯಿಂದ ಕನಕನಾಲಾ ಜಲಾಶಯವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಎಲ್ಲರೂ ಕೈಜೋಡಿಸೋಣ ಎಂದರು.
ನೀರಾವರಿ ಇಲಾಖೆಯ ಎಇಇ ದಾವೂದ್, ತಾಪಂ ಎಡಿ ಶಿವಾನಂದರೆಡ್ಡಿ, ಎಪಿಎಂಸಿ ಮಾಜಿ ನಿರ್ದೇಶಕ ಶಂಕರಗೌಡ ಪಾಟೀಲ್, ಪ್ರಮುಖರಾದ ಪಂಪನಗೌಡ ಜಾಲಿಹಾಳ, ಬಸನಗೌಡ ಸಿಂಧನೂರು, ದಿನೇಶ, ಭೀಮಣ್ಣ ಉಪ್ಪಲದೊಡ್ಡಿ, ನಿರುಪಾದೆಪ್ಪ ಗುಡಿಹಾಳ, ಸೋಮನಾಥ ಬೋಗಾಪುರ, ರಾಮಣ್ಣ ನಾಯಕ, ಗಿಡ್ಡಪ್ಪ, ಹನುಮೇಶ್ ಬಾಗೋಡಿ, ಬಿ.ರುದ್ರಗೌಡ, ಮಲ್ಲನಗೌಡ ಸಂಕನಾಳ, ಸೋಮನಾಥ, ಹುಲುಗಪ್ಪ, ಬಸವರಾಜ ಜಿನ್ನದ ಇದ್ದರು.