ಸಿಂಧನೂರಿನ ಕನಕದಾಸ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ‘ಮುತ್ತು ಬಂದಿದೆ ಕೇರಿಗೆ’ ಎಂಬ ಸಂಗೀತ ನೃತ್ಯ ರೂಪಕ ಪ್ರದರ್ಶನ ಗಮನ ಸೆಳೆಯಿತು.
ಸಿಂಧನೂರು: ಕರ್ನಾಟಕ ಭಕ್ತಿ ಪಂಥದ ಶ್ರೇಷ್ಠ ಹರಿದಾಸರು, ಕವಿ ಮತ್ತು ತತ್ವಜ್ಞಾನಿ ಕನಕದಾಸರು ಕೇವಲ ಧಾರ್ಮಿಕ ಬೋಧನೆಗೆ ಸೀಮಿತವಾಗದೆ ಕೀರ್ತನೆಗಳು ಮತ್ತು ಸಾಹಿತ್ಯದ ಮೂಲಕ ಜಾತಿ ಪದ್ಧತಿ ಹಾಗೂ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸಿ ಸಮಸಮಾಜ ನಿರ್ಮಿಸಲು ಶ್ರಮಿಸಿದ ಸಾಮಾಜಿಕ ಪರಿವರ್ತನೆಯ ಹರಿಕಾರರು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಸಹಕಾರದೊಂದಿಗೆ ಕನಕದಾಸ ಶಿಕ್ಷಣ ಸಂಸ್ಥೆ, ತಾಲೂಕು ಕುರುಬರ ಸಂಘ, ಕನಕ ನೌಕರರ ಸಂಘ, ಮಹಿಳಾ ಕನಕ ನೌಕರರ ಸಂಘ, ಕನಕ ಯುವ ಸೇನೆ, ಸಂಗೊಳ್ಳಿ ರಾಯಣ್ಣ ಯುವ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಮುತ್ತು ಬಂದಿದೆ ಕೇರಿಗೆ’ ಎಂಬ ಸಂಗೀತ ನೃತ್ಯ ರೂಪಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೃತ್ಯ ರೂಪಕವನ್ನು ಕಲಾವಿದರು ಅರ್ಥಪೂರ್ಣ ಮತ್ತು ಅದ್ಭುತವಾಗಿ ಪ್ರದರ್ಶಿಸಿದರು. ಕನಕದಾಸರ ಜೀವನ ವೃತ್ತಾಂತವನ್ನು ಬಲ್ಲವರು ಇದನ್ನು ಹೆಚ್ಚು ಅರ್ಥೈಸಿಕೊಂಡಿದ್ದಾರೆ. ಇನ್ನು ಅನೇಕ ಸಂಗತಿಗಳನ್ನು ಸೇರಿಸಿಕೊಂಡು ರೂಪಕ ಪ್ರದರ್ಶಿಸಿದ್ದರೆ ಇನ್ನಷ್ಟು ಮೆರುಗು ಬರುತ್ತಿತ್ತು ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಸಂತ ಕನಕದಾಸರ ಜೀವನ ಚರಿತ್ರೆಯನ್ನು ಮಂಗಳೂರು ವಿಶ್ವವಿದ್ಯಾಲಯ ವತಿಯಿಂದ ಹದಿನಾಲ್ಕು ಭಾಷೆಗಳಲ್ಲಿ ತರ್ಜುಮೆ ಮಾಡಲಾಗಿದೆ. ಈ ರೂಪಕ ಪ್ರದರ್ಶನ ಉಚಿತವಾಗಿದ್ದು, ಜನರಲ್ಲಿ ಕನಕದಾಸರ ವಿಚಾರಗಳನ್ನು ತಿಳಿಯಪಡಿಸುವ ಉದ್ದೇಶ ಹೊಂದಲಾಗಿದೆ. ಅವರ ಕೀರ್ತನೆಗಳು, ಮುಂಡಿಗೆಗಳು ಹಾಗೂ ಕಾವ್ಯಗಳು ಪ್ರಸ್ತುತ ಸಮಾಜಕ್ಕೆ ಅವಶ್ಯಕವಾಗಿವೆ ಎಂದು ತಿಳಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಎಚ್.ಎಫ್. ಮಸ್ಕಿ, ನಿರುಪಾದಪ್ಪ ಗುಡಿಹಾಳ ವಕೀಲ, ಎಸ್. ದೇವೇಂದ್ರಗೌಡ, ರಮಾದೇವಿ ಶಂಭೋಜಿ, ಡಿ.ಎಚ್. ಕಂಬಳಿ ಮಾತನಾಡಿದರು. ಗುರು ನಂಜುಂಡೇಶ್ವ ಮಠದ ಸಣ್ಣಸಿದ್ದಯ್ಯ ಗುರುವಿನ್ ಸಾನ್ನಿಧ್ಯವಹಿಸಿದ್ದರು. ಸಂಗೀತ ನೃತ್ಯ ರೂಪಕದ ನಿರ್ದೇಶಕ ಶ್ರೀನಿವಾಸ ಜಿ.ಕಪ್ಪಣ್ಣ, ತುರ್ವಿಹಾಳ ಅಮೋಘ ರೇವಣಸಿದ್ಧೇಶ್ವರ ಮಠದ ಮಾದಯ್ಯ ಗುರುವಿನ್, ಚಿದಾನಂದಯ್ಯ ಗುರುವಿನ್ ಇದ್ದರು.