ದೇವದುರ್ಗದಲ್ಲಿ ಆಯೋಜಿಸಿದ್ದ ಕನಕ ದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕನ್ನಡ ವಿಶ್ವವಿದ್ಯಾಲಯ ವಿಸ್ತರಣಾ ಕೇಂದ್ರ ನಿರ್ದೇಶಕ ಡಾ.ಶಾಂತಪ್ಪ ಡಂಬಳ ಉದ್ಘಾಟಿಸಿದರು. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ, ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿಣ್ಣೂರು, ಸಂಸ್ಥೆ ಕಾರ್ಯದರ್ಶಿ ಗುರುಲಿಂಗಯ್ಯ ಕೋಡಿಮಠ, ಪ್ರಾಚಾರ್ಯ ಮುತ್ತಣ್ಣ ಇದ್ದರು.
- ಕನ್ನಡ ವಿವಿ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಶಾಂತಪ್ಪ ಡಂಬಳ ಅಭಿಮತ
- ದೇವದುರ್ಗ ಕನಕ ದರ್ಶನ ವಿಶೇಷ ಉಪನ್ಯಾಸ
ಕನ್ನಡದ ಪ್ರಸಿದ್ಧ ಕೀರ್ತನೆಕಾರರಲ್ಲಿ ಕನಕದಾಸರು ಒಬ್ಬರಾಗಿದ್ದು, ಜಾತಿ ವ್ಯವಸ್ಥೆ ವಿರುದ್ಧ ಸಮರ ಸಾರಿ ಭಕ್ತಿ ಮೂಲಕವೇ ಸಮಾನತೆ ತತ್ವ ತಿಳಿಸಿದ್ದರು ಎಂದು ಕನ್ನಡ ವಿವಿ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಶಾಂತಪ್ಪ ಡಂಬಳ ಹೇಳಿದರು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಕಲಾನಿಕೇತನ ಟ್ರಸ್ಟ್‌ನಿಂದ ಆಯೋಜಿಸಿದ್ದ ಕನಕ ದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನಕದಾಸರು ಸಾಹಿತ್ಯ ಲೋಕಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತ ಸಾರ ಎಂಬ ಮಹತ್ವದ ಕೃತಿಗಳನ್ನು ಕೊಟ್ಟಿದ್ದಾರೆ ಎಂದರು.
ಮೋಹನ ತರಂಗಿಣಿ 42 ಸಂಧಿ ಮತ್ತು 2800 ಪದ್ಯಗಳಿಂದ ಕೂಡಿದ ಸಾಂಗತ್ಯ ಕಾವ್ಯವಾಗಿದೆ. ಕನಕದಾಸರು ಈ ಕೃತಿಯಲ್ಲಿ ಕೃಷ್ಣನ ಚರಿತ್ರೆಯನ್ನು ಹೇಳುವ ಮೂಲಕ ಕೃಷ್ಣದೇವರಾಯ ಅವರನ್ನು ಕೃಷ್ಣನಿಗೆ ಹೋಲಿಸಿದ್ದಾರೆ. ವಿಜಯನಗರವೇ ಕನಕದಾಸರಿಗೆ ದ್ವಾರಕಾಪುರಿಯಾಗಿ ಕಂಡಿತ್ತು. ದಂಡನಾಯಕರಾಗಿದ್ದ ಕನಕದಾಸರು ವಿಜಯನಗರದ ರಾಜವೈಭವ, ರಾಜಸಭೆ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ ಉತ್ಸವ, ಯುದ್ಧ ವಿಧಾನಗಳನ್ನು ಕಣ್ಣಾರೆ ಕಂಡು ಅದನ್ನೇ ಕಾವ್ಯಕ್ಕೆ ಅಳವಡಿಸಿದರು. ಹಾಗಾಗಿ ಮೋಹನ ತರಂಗಿಣಿಯಲ್ಲಿ ಪೌರಾಣಿಕ ಕಥೆಯ ಜತೆಗೆ ವಿಜಯನಗರದ ಸಮಕಾಲೀನ ಜೀವನ ಚಿತ್ರಣವೂ ಇದೆ ಎಂದರು.
ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ, ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿಣ್ಣೂರು, ಕಾರ್ಯದರ್ಶಿ ಗುರುಲಿಂಗಯ್ಯ ಕೋಡಿಮಠ, ಪ್ರಾಚಾರ್ಯ ಮುತ್ತಣ್ಣ ಇತರರಿದ್ದರು.