ಹುಣಚೇಡಿ ಗ್ರಾಮದಲ್ಲಿ 100 ದಿನಗಳ ಕ್ಷಯಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ನಡೆಯಿತು. ತಾಲೂಕು ಕ್ಷಯರೋಗ ಮೇಲ್ವಿಚಾರಕ ಪ್ರೇಮ್ ಪ್ರಸಾದ್, ಪಿಡಿಒ ಹಾಜೀ ಬೇಗಂ, ಜ್ಞಾನಸುಂದರಿ, ಅಮರೇಶ ಯಾದವ, ತಿಮಲಮ್ಮ ಇತರರಿದ್ದರು.
ಸಿರವಾರ: ಕ್ಷಯಮುಕ್ತ ನವಲಕಲ್ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಪ್ರತಿಯೊಬ್ಬರ ಸಹಕಾರ ಬೇಕು ಎಂದು ತಾಲೂಕು ಕ್ಷಯರೋಗ ಮೇಲ್ವಿಚಾರಕ ಪ್ರೇಮ್ ಪ್ರಸಾದ್ ಹೇಳಿದರು.
ನವಲಕಲ್ ಗ್ರಾಪಂ ವ್ಯಾಪ್ತಿಯ ಹುಣಚೇಡಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 100 ದಿನಗಳ ಕ್ಷಯಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷಯ ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಒಬ್ಬರಿಗೆ ಗಾಳಿಯ ಮೂಲಕ ಹರಡುತ್ತದೆ. ಯಾವುದೇ ವ್ಯಕ್ತಿಯು ಕ್ಷಯ ಲಕ್ಷಣಗಳಿದ್ದರೆ ತಪಾಸಣೆ ಮಾಡಿಸದೆ, ಸರಿಯಾಗಿ ಚಿಕಿತ್ಸೆ ಪಡೆಯದಿದ್ದಲ್ಲಿ, ಒಂದು ವರ್ಷದಲ್ಲಿ ಹತ್ತರಿಂದ ಹದಿನೈದು ಜನರಿಗೆ ಹರಡುತ್ತದೆ. ಆದ್ದರಿಂದ ರೋಗದ ಲಕ್ಷಣಗಳಾದ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕಫ, ಜ್ವರ, ಹಸಿವಾಗದೇ ಇರುವುದು, ತೂಕ ಕಡಿಮೆಯಾಗುವುದು ಕಂಡು ಬಂದರೆ ತಕ್ಷಣ ಪರೀಕ್ಷೆ ಮಾಡಿಸಿ, ಸರಿಯಾಗಿ ಚಿಕಿತ್ಸೆ ಪಡೆಯಬೇಕು ಎಂದರು.
ತಪಾಸಣೆ, ಪರೀಕ್ಷೆ ಹಾಗೂ ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ. ನಿಕ್ಷಯ ಪೋಷಣ ಯೋಜನೆಯಡಿ ಪ್ರತಿ ತಿಂಗಳು ರೋಗಿಗೆ ಒಂದು ಸಾವಿರ ರೂ. ಪೌಷ್ಟಿಕ ಆಹಾರ ಸೇವನೆಗೆ ಸರ್ಕಾರ ಪ್ರೋತ್ಸಾಹಧನ ನೀಡುತ್ತದೆ. ನಿಕ್ಷಯ ಮಿತ್ರ ದಾನಿಗಳಿಂದ ಪೌಷ್ಟಿಕ ಆಹಾರ ವಿತರಣೆ ಇರುತ್ತದೆ. ಆರೋಗ್ಯ ಇಲಾಖೆ ಯೋಜನೆಗಳನ್ನು ಪಡೆದು ಕ್ಷಯಮುಕ್ತ ಗ್ರಾಮ ಪಂಚಾಯಿತಿ ಹಾಗೂ ಕ್ಷಯಮುಕ್ತ ಭಾರತ ಮಾಡಲು ಸಹಕರಿಸಿ, ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಎಂದು ಕೋರಿದರು.
ಪಿಡಿಒ ಹಾಜೀ ಬೇಗಂ, ಮಹತ್ವಾಕಾಂಕ್ಷೆ ಯೋಜನೆ ಸಿರವಾರ ತಾಲೂಕು ಸಂಯೋಜಕಿ ಜ್ಞಾನಸುಂದರಿ, ಸಮುದಾಯ ಆರೋಗ್ಯ ಅಧಿಕಾರಿ ಅಮರೇಶ ಯಾದವ, ಪ್ರಯೋಗಶಾಲಾ ತಂತ್ರಜ್ಞಾನ ಅಧಿಕಾರಿ ತಿಮಲಮ್ಮ ಇತರರಿದ್ದರು.