ಹಟ್ಟಿಯ ಪೈ ಭವನದಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಮಾತನಾಡಿದರು. ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಶಫೀ, ಸಿಬ್ಬಂದಿ ಶಾಂತಪ್ಪ ಆನ್ವರಿ, ಯಂಕೋಬ ಮಿಯ್ಯಪುರ, ಸಿದ್ದಪ್ಪ ಮುಂಡರಗಿ, ಮೈನುದ್ದೀನ್ ಇತರರಿದ್ದರು. 
ರಾಯಚೂರು

ಉದ್ಯೋಗದ ಅನಿಶ್ಚಿತತೆ, ಹೆಚ್ಚಿದ ಶೋಷಣೆ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಿಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಆರೋಪ
  • ಹಟ್ಟಿಚಿನ್ನದಗಣಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ
ಹಟ್ಟಿಚಿನ್ನದಗಣಿ: ಒಂದು ಕಡೆ ಜಾಗತಿಕ ಬಂಡವಾಳಶಾಹಿಗಳ ಜತೆ ಸ್ನೇಹ ಬೆಳೆಸುತ್ತಿರುವ ಸರ್ಕಾರ, ಮತ್ತೊಂದು ಕಡೆ ಗ್ರಾಮಗಳ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ. ಇದರ ಪರಿಣಾಮ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ, ಉದ್ಯೋಗದ ಅನಿಶ್ಚಿತತೆ ಮತ್ತು ಶೋಷಣೆ ಹೆಚ್ಚುತ್ತಿದೆ ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಆರೋಪಿಸಿದರು.
ಪಟ್ಟಣದ ಪೈ ಭವನದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಹಟ್ಟಿಚಿನ್ನದಗಣಿ ಕಾರ್ಮಿಕರ ಸಮಸ್ಯೆಗಳನ್ನು ಉಲ್ಲೇಖಿಸಿದ ಅವರು, ಸ್ಥಿರ ಉದ್ಯೋಗವನ್ನು ಕಡಿಮೆ ಮಾಡಿ ಗುತ್ತಿಗೆ ಪದ್ಧತಿ ಹೆಚ್ಚಿಸಲಾಗುತ್ತಿದೆ. ಕಾರ್ಮಿಕರನ್ನು ಎರಡ್ಮೂರು ವರ್ಷದ ಫಿಕ್ಸ್ಡ್ ಟರ್ಮ್ ಉದ್ಯೋಗಕ್ಕೆ ಸೀಮಿತಗೊಳಿಸುವ ಹೊಸ ಕಾನೂನುಗಳು ಕಾರ್ಮಿಕರ ಭವಿಷ್ಯವನ್ನೇ ಕತ್ತಲೆಗೆ ತಳ್ಳುತ್ತಿವೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ 1970ರ ಕಾನೂನಿನ ಅಡಿಯಲ್ಲಿ ಕಾರ್ಮಿಕರಿಗೆ ಇದ್ದ ರಕ್ಷಣೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದೆ. ಹಟ್ಟಿ ಗಣಿಯಲ್ಲೇ ಸಾವಿರಾರು ಗುತ್ತಿಗೆ ಕಾರ್ಮಿಕರು ಇದ್ದರೂ ಅವರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಶಾಶ್ವತ ಕೆಲಸಗಳನ್ನು ಕೂಡ ಗುತ್ತಿಗೆ ಕಾರ್ಮಿಕರಿಂದ ಮಾಡಿಸುವುದು ಕಾನೂನು ವಿರೋಧಿಯಾದರೂ, ಅದನ್ನು ತಡೆಯುವ ವ್ಯವಸ್ಥೆಯನ್ನೇ ಸರ್ಕಾರ ಕಿತ್ತುಹಾಕಿದೆ. ಇನ್ನು ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ಕೆಲಸಕ್ಕೆ ನಿಯೋಜಿಸುವ ನಿಯಮಗಳು ಗಣಿಗಾರಿಕೆ ಕ್ಷೇತ್ರದಲ್ಲಿ ಅಪಾಯಕಾರಿ. ಇದು ಮಹಿಳಾ ಸುರಕ್ಷತೆಗೆ ದೊಡ್ಡ ಧಕ್ಕೆ. ಜಾತಿ, ಧರ್ಮ, ಭಾಷೆ ಎಂಬ ಬೇಧಗಳನ್ನು ಮೀರಿ ಕಾರ್ಮಿಕರು ಒಂದಾಗಿ ಹೋರಾಡಬೇಕು. ಈ ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದುಪಡಿಸುವವರೆಗೆ ಹೋರಾಟ ನಿಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ ಶಫೀ, ಸಿಬ್ಬಂದಿ ಶಾಂತಪ್ಪ ಆನ್ವರಿ, ಯಂಕೋಬ ಮಿಯ್ಯಪುರ, ಸಿದ್ದಪ್ಪ ಮುಂಡರಗಿ, ಮೈನುದ್ದೀನ್, ಚಂದ್ರಶೇಖರ ನೆಲೋಗಿ, ಗಿರಿಯಪ್ಪ ಪೂಜಾರಿ, ಮಹ್ಮದ ಹನೀಫ್, ರಮೇಶ ವೀರಾಪುರ, ಅಲ್ಲಾಬಕ್ಷ, ಜಮದಗ್ನಿ, ನಿಂಗಪ್ಪ ವೀರಾಪುರ, ರಮೇಶಬಾಬು, ಸರಸ್ವತಿ ಇತರರಿದ್ದರು.