ಛಲವಾದಿ ನಾರಾಯಣಸ್ವಾಮಿ 
ರಾಯಚೂರು

ರಾಜ್ಯದಲ್ಲಿ ಗೃಹ ಸಚಿವರು ಇದ್ದಾರಾ? ಛಲವಾದಿ ನಾರಾಯಣಸ್ವಾಮಿ ಆಕ್ರೋಶ

ಜಿಲ್ಲೆಯಲ್ಲಿ ತಳ ಸಮುದಾಯದ ಮೂವರ ಕೊಲೆ ಪ್ರಕರಣಗಳನ್ನು ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಗೃಹ ಸಚಿವರು ಇದ್ದರೆ ಈ ರೀತಿ ಘಟನೆಗಳು ನಡೆಯುತ್ತಿರಲ್ಲವೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.

ನಗರದ ಕೃಷಿ ವಿವಿಯ ಆವರಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿಯ ಯುವತಿ ಅಶ್ವಿನಿ ಅತ್ಯಾಚಾರ ಕೊಲೆ ಪ್ರಕರಣ, ಲಿಂಗಸುಗೂರಿನ ರಾಣೆಮ್ಮ, ಹದಿನಾಳ ಗ್ರಾಮದ ಬೂಮಾನಂದ ಕೊಲೆ ಪ್ರಕರಣಗಳನ್ನು ಖಂಡಿಸುತ್ತೇನೆ. ಕೊಲೆಗೆ ಕಾರಣ ಏನು, ಯಾಕೆ ಆಗುತ್ತಿವೆಂದು ಸ್ಥಳಕ್ಕೆ ಹೋಗಿ ತಿಳಿದುಕೊಳ್ಳುವೆ. ರಾಜ್ಯದಲ್ಲಿ ನಿಜವಾಗಿಯು ಗೃಹ ಸಚಿವರು ಇದ್ದಾರಯೇ?, ಪ್ರಿಯಾಂಕ ಖರ್ಗೆಯವರು ಈ ಭಾಗದವರೇ ಆಗಿದ್ದರು ಏನು ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಗುರಿಯಾಗಿಟ್ಟುಕೊಂಡು ಓಡಾಡುತ್ತಿದ್ದರೆ ಸಾಕಾ, ಈ ಪ್ರಕರಣಗಳನ್ನು ಯಾರು ನೋಡುವರು, ಬಡವರಿಗೆ ನ್ಯಾಯ ಕೊಡುವ ಬದಲು ತಮ್ಮ ಚಪಲ ತೀರಿಸಿಕೊಳ್ಳುವುದರಲ್ಲೇ ಇದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು.
ರಾಜ್ಯದಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಖಂಡನೀಯ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಮಾದಕ ವಸ್ತು ಸೇವನೆ ನಡೆದಿದೆ. ಮಾದಕ ವಸ್ತು ಸೇವನೆ ಇಂತಹ ಘಟನೆಗೆ ಕಾರನವೆಂದು ಮಾಹಿತಿ ತಿಳಿದು ಬರುತ್ತಿದೆ. ಗೃಹ ಸಚಿವರು ಅವರ ಕೆಲಸವನ್ನು ಮರೆತಿದ್ದಾರೆ. ಹಿಂದೆ ಆರ್‌ಡಿಪಿಆರ್‌ನಲ್ಲೂ ಫೇಲ್ ಈಗಲೂ ಫೇಲ್ ಆಗಿದ್ದಾರೆಂದು ಲೇವಡಿ ಮಾಡಿದರು.
ಪರಿಶಿಷ್ಟ ವರ್ಗಗಳ ಬಡವರ ಅಭಿವೃದ್ಧಿಗೆ ಅನೇಕ ಯೋಜನೆಗಳಿವೆ, ಅವುಗಳನ್ನು ಜಾರಿ ಮಾಡಬೇಕಿತ್ತು.
ಆದರೆ ಅದೇ ಸಮುದಾಯದ ಮಂತ್ರಿ ಕೈ ಕೆಳಗೆ 187 ಕೋಟಿ ದುರುಪಯೋಗವಾಗಿದೆ. ಸರ್ಕಾರ ಅವರನ್ನು ಕೈಬಿಡಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ. ಇಲ್ಲಿಯವರೆಗೆ ಸದನದ ಒಳಗೆ ಹೋರಾಟ ಆಗಿದೆ. ಇದೀಗ ಹೊರಗೆ ಸೆಪ್ಟೆಂಬರ್ 1ರಿಂದ ಹೋರಾಟ ಪ್ರಾರಂಭ ಆಗುತ್ತಿದೆ. ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಮತ್ತೆ ನಾಗೇಂದ್ರಗೆ ಮಂತ್ರಿ ಸ್ಥಾನ ಯಾವ ಕಾರಣಕ್ಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ. ಸಮುದಾಯಕ್ಕೆ ಅನ್ಯಾಯ ಆಗಿದೆ ಹೀಗಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಎಂದರು.
ಈದ ಮೀಲಾದ್ ಹಬ್ಬದ ನಿಮಿತ್ತ ಬೆಂಗಳೂರಿನ ಬಸವನಗುಡಿಯಲ್ಲಿ ಮೆರವಣಿಗೆ ಹೋಗುತ್ತಿದ್ದ ಸ್ಥಳದಲ್ಲಿ ಪುನೀತ್ ಕೆರೆಹಳ್ಳಿ ಆಫೀಸ್ ಇದೆ. ಆ ಜಾಗದಲ್ಲಿ ಘೋಷಣೆ ಕೂಗಿ ಕಲ್ಲು ತೂರಿದ್ದಾರೆ. ವ್ಯಕ್ತಿಯೊಬ್ಬರಿಗೆ ರಾಡ್ ತಗೊಂಡು ಹೊಡೆದಿದ್ದಾರೆ.
ಮೆರವಣಿಗೆಯಲ್ಲಿ ರಾಡ್ ಹೇಗೆ ಬಂತು. ಬೆಂಗಳೂರಿನಲ್ಲಿ ಮೆರವಣಿಗೆ ಹೋಗಬಾರದೆಂದು ನ್ಯಾಯಾಲಯದ ಆದೇಶ ಇದೆ. ಇವರಿಗೆ ಮೆರವಣಿಗೆ ಹೋಗಲು ಯಾರು ಅನುಮತಿ ಕೊಟ್ಟರು. ಮುಸ್ಲಿಮರ ಓಲೈಕೆ ರಾಜಾಕಾರಣಕ್ಕೆ ಈ ಕಾಂಗ್ರೆಸ್ ಸರ್ಕಾರ ಕಟ್ಟುಬಿದ್ದಿದ್ದು, ಈ ಗಲಾಟೆಗೆ ಕಾಂಗ್ರೆಸ್‌ನ ಧೋರಣೆಯೇ ಕಾರಣವೆಂದು ಆರೋಪಿಸಿದರು.