ಚೀಕಲಪರ್ವಿ ಗ್ರಾಮದ ರುದ್ರಮುನಿ ಶಿವಯೋಗಿಗಳ ಮಠದಲ್ಲಿ ಪುಣ್ಯ ಸ್ಮರಣೋತ್ಸವ ಅಂಗವಾಗಿ ರುದ್ರಮುನಿ ಶಿವಯೋಗಿಗಳ ಕರ್ತೃಗದ್ದುಗೆಗೆ ಹೂವಿನ ಅಲಂಕಾರ ಮಾಡಲಾಗಿತ್ತು.
ಮಾನ್ವಿ: ಚೀಕಲಪರ್ವಿ ಗ್ರಾಮದ ರುದ್ರಮುನಿ ಶಿವಯೋಗಿಗಳ 98ನೇ ವಷರ್ದ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶನಿವಾರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಹಾಲ್ವಿಯ ಚರಣಗಿರಿ ಸಂಸ್ಥಾನಮಠದ ಅಭಿನವ ಮಹಾಂತ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ, ದೇಶದ ಏಕತೆ, ಅಖಂಡತೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವುದರ ಜತೆಗೆ ಧಾರ್ಮಿಕ ಮೌಲ್ಯಗಳು ಮತ್ತು ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಮಠಗಳು ಸಮಾಜದಲ್ಲಿ ಭಕ್ತಿ, ಶಾಂತಿ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೇಂದ್ರಗಳಾಗಿವೆ ಎಂದರು.
ರುದ್ರಮುನಿ ಶಿವಯೋಗಿಗಳ ಹಾಗೂ ವಿರೂಪಾಕ್ಷ ಸ್ವಾಮಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಮತ್ತು ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀಮಠದವರೆಗೆ ವೀರಗಾಸೆ ಕಲಾವಿದರು ಸೇರಿದಂತೆ ವಿವಿಧ ಜನಪದ ಕಲಾತಂಡಗಳೊಂದಿಗೆ ಸುಮಂಗಲಿಯರು ಕುಂಭ ಕಳಸದೊಂದಿಗೆ ಶ್ರೀ ರುದ್ರಮುನಿ ಮಹಾಶಿವಯೋಗಿಗಳ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆ ನಡೆಸಲಾಯಿತು.
ಶ್ರೀಮಠದ ಶ್ರೀಗಳಾದ ಸದಾಶಿವ ಸ್ವಾಮೀಜಿ, ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಯದ್ದಲದೊಡ್ಡಿ ಸುವರ್ಣಗಿರಿಮಠದ ಮಹಾಲಿಂಗ ಸ್ವಾಮೀಜಿ, ಬಳಗನೂರು ಮರಿಬಸವಶಿವಯೋಗಿಗಳ ಮಠದ ಸಿದ್ದಬಸವ ಸ್ವಾಮೀಜಿ, ಬೊಮ್ಮನಹಳ್ಳಿ ಪಟ್ಟದ ಮಠದ ಶಾಂತಮಲ್ಲ ಸ್ವಾಮೀಜಿ ಇನ್ನಿತರರಿದ್ದ್ದರು.