ಸಿಂಧನೂರಿನ ನೀಲಾಂಬಿಕಾ ಪ್ರಸಾದ ನಿಲಯದಲ್ಲಿ ವ್ಯಸನಮುಕ್ತ ಬದುಕಿಗಾಗಿ ವಚನ ಶ್ರವಣ 8ನೇ ದಿನದ ಕಾರ್ಯಕ್ರಮವನ್ನು ವಚನ ಪುಸ್ತಕ ನೀಡುವ ಮೂಲಕ ಗದಗಿನ ಶರಣತತ್ವ ಚಿಂತಕ ಅಶೋಕ ಬರಗುಂಡಿ ಉದ್ಘಾಟಿಸಿದರು. ಪ್ರಮುಖರಾದ ಡಾ.ರಾಜಶೇಖರ ನಾಡಿನಾಳ, ಬಸವಂತರಾಯಗೌಡ ದಿದ್ದಿಗಿ, ಗಂಗಮ್ಮ ಪಿ.ವೀರಭದ್ರಪ್ಪ, ಶರಣಬಸಪ್ಪ ಸಾಹುಕಾರ ಇದ್ದರು.
- ಸಾಹಿತಿ ಅಶೋಕ ಬರಗುಂಡಿ ಸಲಹೆ
- ಸಿಂಧನೂರು ವ್ಯಸನಮುಕ್ತ ಬದುಕಿಗಾಗಿ ವಚನ ಶ್ರವಣ
ಸಿಂಧನೂರು: ಜ್ಞಾನಕ್ಕೆ ಲಿಂಗ ಭೇದವಿಲ್ಲ. ಅದು ಸಾಧಕರ ಸ್ವತ್ತೇ ಹೊರತು ಆಲಸಿಗಳ ಸ್ವತ್ತಲ್ಲ ಎಂದು ಗದಗಿನ ಶರಣತತ್ವ ಚಿಂತಕ ಅಶೋಕ ಬರಗುಂಡಿ ಹೇಳಿದರು.
ನೀಲಾಂಬಿಕಾ ಪ್ರಸಾದ ನಿಲಯದಲ್ಲಿ ಸಂಜೆ ಏರ್ಪಡಿಸಿದ್ದ ವ್ಯಸನಮುಕ್ತ ಬದುಕಿಗಾಗಿ ವಚನ ಶ್ರವಣ ಎಂಟನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಾದಿ ಶರಣರು ಮತ್ತೆ ಬರುವುದಿಲ್ಲ. ಆದರೆ, ಅವರ ವಿಚಾರಗಳನ್ನು ನಮ್ಮೊಳಗೆ ಬರಿಸಿಕೊಳ್ಳಬೇಕು. ಅಂತರಂಗಕ್ಕೆ ಇಳಿಸಿಕೊಳ್ಳುವುದೇ ಅಂತರಂಗದ ಸಾಧನೆ. ನಾವು ಬೋಧಕರಾದರೆ ಸಾಲದು, ಸಾಧಕರಾಗಬೇಕು ಎಂದರು.
ಜ್ಞಾನಕ್ಕೆ ಗಂಡು, ಹೆಣ್ಣು ಎಂಬ ಭೇದ ಮಾಡಲು ಸಾಧ್ಯವೇ ಎಂದು ಶಿವಶರಣೆ ಗೊಗ್ಗವ್ವ ಪ್ರಶ್ನಿಸಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ ಅವರ ನಾಯಕತ್ವದಲ್ಲಿ ಮಹಿಳೆಯರು ಮುನ್ನೆಲೆಗೆ ಬಂದು ಅಕ್ಷರಾಭ್ಯಾಸ ಮಾಡಿ, ಸ್ವತಃ ವಚನಗಳನ್ನು ರಚಿಸುವ ಮೂಲಕ ಪ್ರತಿಭೆ ಮೆರೆದರು. ಸಾಮಾಜಿಕ ಚಳವಳಿ ಕಟ್ಟುವುದರ ಜತೆಗೆ ತಮ್ಮ ಬದುಕು ಹಾಗೂ ಸಮಾಜದ ಓರೆ-ಕೋರೆಗಳನ್ನು ತಿದ್ದುವ ಕೆಲಸ ಮಾಡಿದರು ಎಂದು ತಿಳಿಸಿದರು.
ಪ್ರಮುಖರಾದ ಶರಣಬಸಪ್ಪ ಸಾಹುಕಾರ, ಡಾ.ರಾಜಶೇಖರ ನಾಡಿನಾಳ, ಬಸವಂತರಾಯಗೌಡ ದಿದ್ದಿಗಿ, ಗಂಗಮ್ಮ ಪಿ. ವೀರಭದ್ರಪ್ಪ, ಬಸಮ್ಮ ತಾಳಿಕೋಟೆ, ಮುಖ್ಯಶಿಕ್ಷಕ ಮಲ್ಲಪ್ಪ, ಹನುಮನಗೌಡ ಕಾಸರೆಡ್ಡಿ ಇತರರಿದ್ದರು.