ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯದ ರಾಯಚೂರು
ರಾಯಚೂರು
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ 24 ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆಂದು ಆರೋಪಿಸಿ ಕರ್ನಾಟಕ ನಾಯಕರ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ. ರವಿಕುಮಾರ ನಾಯಕ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರಿಂದ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ಕಲಬುರಗಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಮಾಡಲಾಗಿದೆ.
ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಫೆಬ್ರವರಿ 18ರಂದು ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ವಿಶ್ವವಿದ್ಯಾಲಯದ ಯುಜಿಸಿ 2018ರ ನಿಯಮಾವಳಿಯ ಟೇಬಲ್3ಎ ಮತ್ತು 3ಬಿ ಅನ್ವಯ ನೇಮಕಾತಿ ನಡೆಯಬೇಕಾಗಿದ್ದರೂ, ವಿಶ್ವವಿದ್ಯಾಲಯ ಆಡಳಿತವು ಉದ್ದೇಶಪೂರ್ವಕವಾಗಿ ಆ ನಿಯಮಗಳನ್ನು ಕಡೆಗಣಿಸಿ ಟೇಬಲ್ 6ಎ ಮತ್ತು 6ಬಿ ಆಧಾರದಲ್ಲಿ ಪ್ರಕ್ರಿಯೆ ಮುಂದುವರೆಸಿದೆಂದು ದೂರಿನಲ್ಲಿ ದಾಖಲಾಗಿದೆ. ಇದರ ಜತೆಗೆ ವಿಷಯಾನುಸಾರ ಅಗತ್ಯ ಶೈಕ್ಷಣಿಕ ಅರ್ಹತೆ ಇಲ್ಲದ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಗೆ ಸೇರಿಸಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಸಂಬಂಧಿತ ವಿಷಯದಲ್ಲಿ ಪದವಿ ಹಾಗೂ ಪಿಎಚ್‌ಡಿ ಹೊಂದಿದ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸದೇ, ಸಂಪೂರ್ಣ ವಿಭಿನ್ನ ಶಾಖೆಯಾದ ಇನ್ಫರ್ಮೇಶನ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪಡೆದ ಅಭ್ಯರ್ಥಿಯನ್ನು ಆಯ್ಕೆ ಪ್ರಕ್ರಿಯೆಗೆ ಒಳಪಡಿಸಿರುವುದು ನೇಮಕಾತಿ ಪಾರದರ್ಶಕತೆ ಹಾಗೂ ಕಾನೂನುಬದ್ಧತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಮೀಸಲಾತಿ ನಿಯಮಗಳ ಉಲ್ಲಂಘನೆ, ಅರ್ಹ ಅಭ್ಯರ್ಥಿಗಳ ಹಕ್ಕು ಹರಣ ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಭಾವಿ ಹಸ್ತಕ್ಷೇಪ ನಡೆದಿರುವ ಶಂಕೆಗಳು ವ್ಯಕ್ತವಾಗಿದ್ದು, ವಿಶ್ವವಿದ್ಯಾಲಯದ ಉನ್ನತ ಆಡಳಿತವರ್ಗ ಹಾಗೂ ಸಿಂಡಿಕೇಟ್ ಸದಸ್ಯರ ಮೌನ ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಕರಣವು ಕಲಬುರಗಿ ಹೈಕೋರ್ಟ್‌ನಲ್ಲಿ ವಿಚಾರಣೆಯಾಗಿದ್ದು, ಅರ್ಜಿದಾರರ ಪರ ವಕೀಲ ಶ್ರೀಧರ ಶ್ರೀನಿವಾಸ್ ಚಿನಿ ವಾದ ಮಂಡಿಸಿದ್ದಾರೆ. ಪ್ರತಿವಾದಿಗಳಾಗಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಉಪಕುಲಪತಿ ಭಾಗಿಯಾಗಿದ್ದು, ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾಯಾಲಯವು ನೇಮಕಾತಿ ಪ್ರಕ್ರಿಯೆಯ ಬಗ್ಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಅಂತಿಮ ವಿಚಾರಣೆವರೆಗೆ ಮುಂದಿನ ಕ್ರಮಗಳ ಮೇಲೆ ಕಾನೂನು ಪರಿಶೀಲನೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.