ರಾಯಚೂರಿನ ಜಿಲ್ಲಾಧಿಕಾರಿಗಳ ಭವನದಲ್ಲಿ ಬುಧವಾರ ಜಿಲ್ಲಾಧಿಕಾರಿ ಪೂವಿತಾ ಎಸ್, ಅಧ್ಯಕ್ಷೆತೆಯಲ್ಲಿ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಉತ್ತಮಗೊಳಿಸಲು ಸಭೆ ನಡೆಸಿದರು. ಜಿಪಂ ಸಿಇಓ ಈಶ್ವರ ಕುಮಾರ್ ಕಾಂದೂ ,ಡಿಡಿಪಿಐ ಮಲ್ಲಿಕಾರ್ಜುನ ಇದ್ದರು. 
ರಾಯಚೂರು

ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಶೇಷ ಗಮನಹರಿಸಲು ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಶ್ರಮಿಸಿ -ಡಿಸಿ
ರಾಯಚೂರು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಿಸಿ, ಜಿಲ್ಲೆಯನ್ನು ರಾಜ್ಯ ಫಲಿತಾಂಶದ ಅಗ್ರಸ್ಥಾನಕ್ಕೆ ತರುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಬುಧವಾರ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಉತ್ತಮಗೊಳಿಸಲು ಕೈಗೊಳ್ಳಬಹುದಾದ ಕ್ರಮ ಹಾಗೂ ರೂಪಿಸಿ ಅನುಷ್ಠಾನಗೊಳಿಸಬಹುದಾದ ಕಾರ್ಯಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರು ಫಲಿತಾಂಶ ಹೆಚ್ಚಿಸಲು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಶೇಷ ಗಮನಹರಿಸಿದಾಗ ಸಹಜವಾಗಿ ಉತ್ತಮ ಫಲಿತಾಂಶ ದೊರೆಯಲಿದೆ. ಮಕ್ಕಳ ಶೈಕ್ಷಣಿಕ ಕೌಟುಂಬಿಕ ವಾತಾವರಣ ಸರಿಯಾಗಿಲ್ಲ ಎನ್ನುವಂತಹ ಬಾಲಿಶ ಕಾರಣಗಳನ್ನು ಹೇಳದೇ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ನಿರ್ದೇಶನ ನೀಡಿದರು.
ಶಿಕ್ಷಕರು ಕೂಡ ಮಕ್ಕಳ ಮಾನಸಿಕ ಸ್ಥಿತಿ-ಗತಿ, ಕಲಿಕೆಯಲ್ಲಿ ಅವರಿಗಿರುವ ಆಸಕ್ತಿ ಮುಂತಾದವುಗಳನ್ನು ಸೂಕ್ಷ ಕ್ರಮವಾಗಿ ಗಮನಿಸಿ, ಅವರಿಗೆ ಅರ್ಥವಾಗುವ ರೀತಿಯಲ್ಲಿ ಬೋಧಿಸುವ ಅಗತ್ಯವಿದೆ. ಬೋಧನೆಗೆ ಹೊರಡುವ ಶಿಕ್ಷಕರು ಪೂರ್ವ ತಯಾರಿಯೊಂದಿಗೆ ತರಗತಿಗೆ ಹೋಗಬೇಕು. ಅದಕ್ಕೆ ಪೂರಕವಾಗಿ ಶಿಕ್ಷಕರು ತಮ್ಮ ಚಿಂತನೆ, ಆಲೋಚನೆ ಮತ್ತು ಬೋಧನಾ ಕ್ರಮಗಳಲ್ಲಿ ಬದಲಾವಣೆ ತಂದುಕೊಂಡು ತರಗತಿ ಆಕರ್ಷಕವಾಗಿರುವಂತೆ ನೋಡಿಕೊಳ್ಳಬೇಕೆಂದುಸಲಹೆ ನೀಡಿದರು.
ಜಿಲ್ಲೆಯ ಎಲ್ಲಾ ತಾಲೂಕಿನ ಮಧ್ಯಾಹ್ನ ಉಪಹಾರ ಯೋಜನೆ, ಬಜೆಟ್ ಸಮಸ್ಯೆ, ಹಾಲಿನ ಕೊರತೆ ಹಾಗೂ ಇತರೆ ಖರ್ಚು ವೆಚ್ಚಗಳ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು. ನಂತರ ಜಿಲ್ಲೆಯ ಎಲ್ಲಾ ತಾಲೂಕಿನ ಸಿ.ಆರ್.ಪಿ, ಬಿಆರ್‌ಪಿ, ಬಿಆರ್‌ಸಿ ಹಾಗೂ ಸಹಾಯಕ ನಿರ್ದೇಶಕರು ಕಾಲಕಾಲಕ್ಕೆ ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಬೇಕು. ಅಗಸ್ಟ್ 17ರಂದು ನಡೆಯುವ ಸಭೆಗೆ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಅಲ್ಲದೆ ಕೆಲವು ಶಾಲೆಗಳಿಗೆ ಬಸ್ ಸೌಕರ್ಯ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ನಡೆದುಕೊಂಡು ಬರುತ್ತಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮವಹಿಸಿ, ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಡಿಡಿಪಿಐ ಮಲ್ಲಿಕಾರ್ಜುನ ಮಾತನಾಡಿ, ಕಳೆದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ ಮಾಡಿ, ಜಿಲ್ಲೆಯಲ್ಲಿ ಕಳೆದ ವರ್ಷ 28,076 ಸಾವಿರ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 26,205 ಉತ್ತೀರ್ಣರಾಗುವ ಮೂಲಕ ರಾಯಚೂರು ಜಿಲ್ಲೆಯು ಶೇ.94.41 ಸ್ಥಾನ ಪಡೆದಿರುತ್ತದೆ. 134 ಶಾಲೆಗಳು ಶೇ.100 ಫಲಿತಾಂಶ ಪಡೆದದಿದ್ದು, ಗ್ರಾಮೀಣ ವಿಭಾಗದಲ್ಲಿ 8,496 ಒಟ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಗಂಡು 3,732 (ಶೇ.96.65) ಹೆಣ್ಣು-4,129 (ಶೇ.94.32) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 3 ರಿಂದ 7 ದಿನದ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಓ ಈಶ್ವರ ಕುಮಾರ್ ಕಾಂದೂ, ಜಿಲ್ಲೆಯ ವಿವಿಧ ತಾಲೂಕಿನ ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹ ಅಧಿಕಾರಿಗಳು, ದೈಹಿಕ ಜಿಲ್ಲಾ ಶಿಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಇದ್ದರು.