ಸಿಂಧನೂರಿನ ಒಳಬಳ್ಳಾರಿ ರಸ್ತೆಯ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಭೂಮಿಪೂಜೆ ನೆರವೇರಿಸಿದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್ ಕೆ.ಹೊಸಳ್ಳಿ, ಪ್ರಾಧಿಕಾರದ ಸದಸ್ಯ ಖಾಜಿ ಮಲಿಕ್, ನಗರಸಭೆ ಮಾಜಿ ಸದಸ್ಯ ಶಬ್ಬೀರ್ ನಾಯಕ್, ಜಿಲ್ಲಾ ಕೆಡಿಪಿ ಸದಸ್ಯ ಶಫಿ ಉಲ್ಲಾ ಖಾನ್ ಇದ್ದರು.
ಮಕ್ಕಳಲ್ಲಿ ಶಿಸ್ತು-ಸಮಯ ಪ್ರಜ್ಞೆ ಮೂಡಿಸಿ
ಸಿಂಧನೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಒಳಬಳ್ಳಾರಿ ರಸ್ತೆಯ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ 10 ಕೋಟಿ ರೂ. ವೆಚ್ಚದ ಶಾಲಾ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಎಲ್ಲ ಶಾಲೆಗಳಿಗೆ ಸೌಲಭ್ಯ ಕೊಟ್ಟಾಗಲೂ ಗುಣಮಟ್ಟದ ಶಿಕ್ಷಣದ ಕೊರತೆ ಕಾಣುತ್ತಿದ್ದೇವೆ. ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಯಚೂರು ಜಿಲ್ಲೆ 25-26 ನೇ ಸ್ಥಾನದಲ್ಲಿರುತ್ತದೆ. ಈ ವರ್ಷ 10ನೇ ಸ್ಥಾನದೊಳಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಮಕ್ಕಳಲ್ಲಿ ಶಿಸ್ತು, ಸಮಯ ಪ್ರಜ್ಞೆ ಮೂಡಿಸಬೇಕು. ಶೈಕ್ಷಣಿಕ ಪ್ರಗತಿಗೆ ಪಾಲಕರ ಪಾತ್ರ ಮುಖ್ಯವಾಗಿದೆ ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಮಾತನಾಡಿ, ಹಿಂದೆ ಅವಕಾಶ, ಸೌಲಭ್ಯಗಳು ಇರಲಿಲ್ಲ. ದೇವಸ್ಥಾನ, ಗಿಡದ ಕೆಳಗೆ ಅಭ್ಯಾಸ ಮಾಡುತ್ತಿದ್ದೆವು. ಇಂದು ಆಧುನಿಕ ಸೌಲಭ್ಯಗಳ ಮೂಲಕ ಶಿಕ್ಷಣ ನೀಡಲಾಗುತ್ತಿದ್ದು, ಸದುಪಯೋಗ ಪಡೆಯಬೇಕು ಎಂದರು. ಅಲ್ಪಸಂಖ್ಯಾತರ ತಾಲೂಕು ವಿಸ್ತರಣಾಧಿಕಾರಿ ಷಡಕ್ಷರಿ ಆದಿಮನಿ, ಪ್ರಾಚಾರ್ಯ ರಾಘವೇಂದ್ರ ಇತರರಿದ್ದರು.