ಸಿಂಧನೂರು: ತುಂಗಭದ್ರಾ ಅಣೆಕಟ್ಟಿನ 33 ಕ್ರಸ್ಟ್‌ಗೇಟ್‌ಗಳ ಪೈಕಿ ಈಗಾಗಲೇ 18 ಹೊಸ ಗೇಟ್‌ಗಳನ್ನು ಅಳವಡಿಕೆ ಕಾರ್ಯ ಮುಗಿದಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆಯಲ್ಲಿ ವಿಳಂಬವಾಗಲಿದೆ ಎಂದು ಹೇಳಿದವರಿಗೆ ಈಗಿನ ಕಾರ್ಯ ಉತ್ತರ ನೀಡಲಿದೆ. ನಾನು ಖುದ್ದಾಗಿ ಭೇಟಿ ನೀಡಿ, ಗೇಟ್ ಅಳವಡಿಕೆ, ಬಾಕಿ ಉಳಿದಿರುವ ಕಾಮಗಾರಿ ಮುಗಿಸುವ ಬಗ್ಗೆ ಚರ್ಚಿಸಿರುವೆ. ಈಗಾಗಲೇ 18 ಗೇಟ್ ಅಳವಡಿಸಲಾಗಿದೆ.
ಈ ಹಿಂದೆ ಒಡೆದಿದ್ದ 19 ಮತ್ತು 20ನೇ ಗೇಟ್ ಅಳವಡಿಕೆ ಕಾಮಗಾರಿ ನಡೆದಿದೆ. ಇದು ಮುಗಿದರೆ, ಮುಂದಿನ ಗೇಟ್ ಅಳವಡಿಕೆ ಕಾಮಗಾರಿ ಸುಲಭವಾಗಿ ಮುಗಿಯಲಿದೆ ಎನ್ನುವ ಭರವಸೆ ಇದೆ. ಏ.15 ವೇಳೆಗೆ ಬಹುತೇಕ ಕಾಮಗಾರಿ ಒಂದು ಹಂತಕ್ಕೆ ತಲುಪಲಿದೆ. ಏ.15 ರಿಂದ ಮೇ 15ರವರೆಗೆ ಗೇಟ್ ಚೈನ್ ಅಳವಡಿಸುವ ಕಾರ್ಯ ನಡೆಯಲಿದೆ. ಮೇ ಕೊನೆ ವಾರದಲ್ಲಿ ಟೆಸ್ಟಿಂಗ್ ನಡೆದು, ಮುಂದಿನ ಮುಂಗಾರು ಹಂತಕ್ಕೆ ನಾಲೆಗೆ ನೀರು ಹರಿಯಲಿದೆ ಎಂದು ತಿಳಿಸಿದರು.
ಕೊಪ್ಪಳ ತಾಲೂಕಿನ ಬಸಾಪುರ ಬಳಿ 13ನೇ ಮೈಲ್ ಬಳಿ 50-70 ಅಡಿ ಎತ್ತರದಲ್ಲಿ ಎಡದಂಡೆ ನಾಲೆ ಕುಸಿದು ಅಪಾರ ನೀರು ಜಮೀನುಗಳಿಗೆ ನುಗ್ಗಿ ನಷ್ಟವಾಗಿದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ನಾವು ರೈತರ ಮನವೊಲಿಸಿ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸುವುದಾಗಿ ಹೇಳಿದ್ದೇವೆ. ನಾಲೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಕನಿಷ್ಠ 20 ದಿನಗಳು ಬೇಕಿದೆ.
ಕುಡಿವ ನೀರಿನ ಸಂಬಂಧ ನಾಲೆಗೆ 2 ಸಾವಿರ ಕ್ಯೂಸೆಕ್‌ನಂತೆ ನೀರು ಹರಿಸಲಾಗಿತ್ತು. ನೀರಾವರಿ ಇಲಾಖೆಯ ಎಇಇ ತಪ್ಪಿನಿಂದ ದೊಡ್ಡ ಅನಾಹುತ ಸಂಭವಿಸಿದ್ದು, ಸರ್ಕಾರಕ್ಕೆ 2 ಕೋಟಿ ರೂ. ನಷ್ಟವಾಗಲಿದೆ. ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿ, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ, ಆರ್.ಅಂಬ್ರೂಸ್, ಮಲ್ಲನಗೌಡ ಮಾವಿನಮಡ್ಗು ಇದ್ದರು.