ಮಾನ್ವಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಕಾರ್ಮಿಕರ ದಿನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಧೀಶ ಎಚ್.ಕೊಣ್ಣೂರು ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕಿ ಅರ್ಚನಾ ಯಾದವ್, ತಾಪಂ ಇಒ ಖಾಲಿದ್ ಆಹ್ಮದ್ ಇತರರಿದ್ದರು.
- ಸಿವಿಲ್ ನ್ಯಾಯಧೀಶ ಆನಂದ ಎಚ್.ಕೊಣ್ಣೂರು ಹೇಳಿಕೆ
- ಮಾನ್ವಿ ಕಾನೂನು ಅರಿವು-ನೆರವು
ಮಾನ್ವಿ: ಕಾರ್ಮಿಕರು ಕಾನೂನುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಾಗ ಮಾತ್ರ ಅವುಗಳಿಂದ ಪರಿಹಾರವನ್ನು ಪಡೆದುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂದು ಸಿವಿಲ್ ನ್ಯಾಯಧೀಶ ಆನಂದ ಎಚ್.ಕೊಣ್ಣೂರು ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಮತ್ತು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಟ್ಟಡ ಕಾರ್ಮಿಕರ ಮಕ್ಕಳ ಮದುವೆ, ವಿದ್ಯಾಭ್ಯಾಸ, ಆರೋಗ್ಯ ಸೇರಿದಂತೆ ಕೆಲಸದ ಸ್ಥಳದಲ್ಲಿ, ಅಪಘಾತ ಸಂದರ್ಭದಲ್ಲಿ ಸೌಲಭ್ಯ ಮತ್ತು ಪರಿಹಾರವನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕಿ ಅರ್ಚನಾಯಾದವ್ ಮಾತನಾಡಿ, ಸ್ಥಳಿಯವಾಗಿರುವ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಸ್ಥೆಯವರು ಕಡ್ಡಾಯವಾಗಿ ಅದೇಶ ಪತ್ರವನ್ನು ನೀಡಬೇಕು. ವಾರಕ್ಕೊಮ್ಮೆ ರಜೆ ನೀಡಬೇಕು, ಕನಿಷ್ಠ 15 ಸಾವಿರ ರೂ. ವೇತನ ನೀಡಬೇಕು, ಹಾಜರಾತಿ ಇಡಬೇಕು. 8 ತಾಸಿಗಿಂತ ಹೆಚ್ಚಿನ ಸಮಯ ಕೆಲಸವನ್ನು ಮಾಡಿದಲ್ಲಿ ಹೆಚ್ಚುವರಿ ವೇತನ ನೀಡಬೇಕು ಎಂದರು.
ತಾಲೂಕು ಕಾರ್ಮಿಕ ನಿರೀಕ್ಷಕ ಮಲ್ಲಪ್ಪ ದೊರೆ, ತಾಪಂ ಇಒ ಖಾಲಿದ್ ಆಹ್ಮದ್, ಪಿಐ ಸೋಮಶೇಖರ ಎಸ್.ಕೆಂಚರೆಡ್ಡಿ, ತಾಲೂಕು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ವಿಶ್ವನಾಥ ರಾಯಪ್ಪ, ಯಲ್ಲಪ್ಪ ಹಿರೆಬಾದರದಿನ್ನಿ, ವಕೀಲರಾದ ಶ್ರೀದೇವಿ ಬಳಿಗಾರ, ಅಮೃತ, ಕಾರ್ಮಿಕ ಮುಖಂಡರಾದ ಪರಶುರಾಮ ಬಾಗಲವಾಡ, ಎಂ.ಡಿ.ಜಾಫರ್, ತಾಯಪ್ಪ, ಆಂಜನೇಯ ಕೋಟೆ, ವೆಂಕಣ್ಣ ಇತರರಿದ್ದರು.