ಸಿರವಾರದಲ್ಲಿ ಏರ್ಪಡಿಸಿದ್ದ ವಿರಾಟ ಹಿಂದೂ ಸಮ್ಮೇಳನವನ್ನು ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು ಉದ್ಘಾಟಿಸಿದರು. ಕಲ್ಲೂರಿನ ಶಂಕರಾಚಾರ್ಯರ ಮಠದ ಶಿವರಾಮಾನಂದ ಸ್ವಾಮೀಜಿ, ಪ್ರಮುಖರಾದ ಬಸವರಾಜ ಜಿ., ಜಿ.ಲೋಕರಡ್ಡಿ ಹಾಗೂ ವಿವಿಧ ಮಹನೀಯರ ವೇಷಭೂಷಣದಲ್ಲಿ ಮಕ್ಕಳು ಪಾಲ್ಗೊಂಡಿದ್ದರು.
- ನವಲಕಲ್ ಅಭಿನವ ಸೋಮನಾಥ ಶಿವಾಚಾರ್ಯರ ಅಭಿಮತ
ಸಿರವಾರ: ವಿಶ್ವವೇ ಒಂದಿಲ್ಲೊಂದು ಸಲ ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಸರಿಯಾದ ಮಾರ್ಗದರ್ಶನ ನೀಡುವ ಶಕ್ತಿ ಇರುವುದು ಭಾರತಕ್ಕೆ ಮಾತ್ರ ಎಂದು ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯರು ಹೇಳಿದರು.
ಪಟ್ಟಣದಲ್ಲಿ ಏರ್ಪಡಿಸಿದ್ದ ವಿರಾಟ ಹಿಂದೂ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಭಾರತ ಪುರಾತನ ಸಂಸ್ಕೃತಿ, ಅಧ್ಯಾತ್ಮ ಮತ್ತು ಧರ್ಮದ ತತ್ವಗಳ ಮೂಲಕ ವಿಶ್ವಕ್ಕೆ ಮಾರ್ಗದರ್ಶನ ನೀಡುತ್ತಿದೆ. ವಸುದೈವ ಕುಟುಂಬಕಂ ಎಂಬ ತತ್ವದಡಿ ಶಾಂತಿ, ಸಹಬಾಳ್ವೆ ಮತ್ತು ಸಮರ್ಥನೀಯ ಬೆಳವಣಿಗೆಯನ್ನು ಎತ್ತಿಹಿಡಿಯುತ್ತಿದೆ. ವಿದೇಶಿಗರು ಹಿಂದೂ ಧರ್ಮ, ಆಚಾರ, ವಿಚಾರ, ಸಂಸ್ಕೃತಿಯತ್ತ ಆಕರ್ಷಿತರಾಗುತ್ತಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ವಿಶ್ವಗುರು ಆಗುವತ್ತ ಶರವೇಗದಲ್ಲಿ ಸಾಗುತ್ತಿದೆ ಎಂದರು.
ವಿಎಚ್‌ಪಿ ಕ್ಷೇತ್ರೀಯ ಅರ್ಚಕ ಪುರೋಹಿತ ಪ್ರಮುಖ ಬಸವರಾಜ ಜಿ. ಮಾತನಾಡಿದರು. ಕಾರ್ಯಕ್ರಮದಲ್ಲಿ ಕಳಸ ಹಿಡಿದ 101 ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಇದಕ್ಕೂ ಮುನ್ನ ಬಸವ ವೃತ್ತದಿಂದ ಬಸ್ ನಿಲ್ದಾಣ ಪಕ್ಕದ ಕಾರ್ಯಕ್ರಮ ವೇದಿಕೆವರೆಗೆ ಭಾರತ ಮಾತೆಯ ಭಾವಚಿತ್ರ ಹಾಗೂ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ಮಕ್ಕಳು ಭಾಗವಹಿಸಿದ್ದರು.
ಕಲ್ಲೂರಿನ ಶಂಕರಾಚಾರ್ಯರ ಮಠದ ಶಿವರಾಮಾನಂದ ಸ್ವಾಮೀಜಿ, ಸಮ್ಮೇಳನ ಸಮಿತಿ ಅಧ್ಯಕ್ಷ ಜಿ.ಲೋಕರಡ್ಡಿ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಮುಖಂಡರಾದ ಜೆ.ಶರಣಪ್ಪ ಗೌಡ, ಜೆ. ಶಿವರಾಮ ರೆಡ್ಡಿ, ನಿಂಬಯ್ಯ ಸ್ವಾಮಿ, ಅಯ್ಯನಗೌಡ ಏರಡ್ಡಿ, ಕಲ್ಲೂರು ಬಸವರಾಜ ನಾಯಕ, ಜೆ.ದೇವರಾಜ ಗೌಡ ಇತರರಿದ್ದರು. ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.