ಲಿಂಗಸುಗೂರು ತಾಪಂ ಕಚೇರಿ ಮುಂದೆ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು. ರಾಜ್ಯ ಸಹಕಾರ್ಯದರ್ಶಿ ಮಹ್ಮದ ಹನೀಫ್, ಬಾಬಾಜಾನಿ, ಶೈನಾಜ್ ಬೇಗಂ, ಝರೀನಾ ಬೇಗಂ, ಸಿದ್ದಮ್ಮ, ಶರಣಮ್ಮ ಹಿರೇ ಉಪ್ಪೇರಿ ಇತರರಿದ್ದರು. 
ರಾಯಚೂರು

ಅನ್ಯಕಾರ್ಯಗಳಿಂದ ಹೆಚ್ಚಿದ ಒತ್ತಡ

ನರೇಶ್ ಕುಮಾರ್
ಲಿಂಗಸುಗೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರ ಸಂಘ ಮಂಗಳವಾರ ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಯೋಜನಾಧಿಕಾರಿ ಮಹಿಬೂಬ್‌ಗೆ ಮನವಿ ಸಲ್ಲಿಸಿತು.
ಐಸಿಡಿಎಸ್ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನವನ್ನು ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸುತ್ತಿಲ್ಲ. ಈ ಮೂಲಕ ಯೋಜನೆಯನ್ನು ದುರ್ಬಲಗೊಳಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಿಂದ 3 ರಿಂದ 6 ವರ್ಷದ ಮಕ್ಕಳನ್ನು ಅಂಗನವಾಡಿಯಿಂದ ದೂರವಿಟ್ಟು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುವ ಕ್ರಮದಿಂದ ಅಂಗನವಾಡಿಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. 
ಪೌಷ್ಟಿಕ ಆಹಾರದ ಘಟಕ ವೆಚ್ಚ ಹೆಚ್ಚಿಸದಿರುವುದು, ಪ್ಯಾಕೆಟ್ ಆಹಾರ ವಿತರಣೆಗೆ ಒತ್ತು, ಎಫ್‌ಆರ್‌ಸ್, ಇ-ಕೆವೈಸಿ ಹಾಗೂ ಪೋಷಣ್ ಟ್ರ್ಯಾಕರ್ ಮೂಲಕ ಅನಗತ್ಯ ಒತ್ತಡ ಹೇರುವುದು, ಬಿಎಲ್‌ಒ ಸೇರಿದಂತೆ ಇಲಾಖೇತರ ಕೆಲಸಗಳನ್ನು ನೀಡುವುದು ನೌಕರರ ಮೇಲೆ ಒತ್ತಡ ಹೆಚ್ಚಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜು.10ರಂದು ರಾಜ್ಯಾದ್ಯಂತ ಕಪ್ಪು ದಿನ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಅಂಗನವಾಡಿ ನೌಕರರ ವೇತನ ಹೆಚ್ಚಿಸಬೇಕು. ಸೇವೆ ಕಾಯಂಗೊಳಿಸಿ ಕನಿಷ್ಠ ವೇತನ, ಪಿಂಚಣಿ, ಗ್ರಾಚ್ಯುಟಿ ಸೇರಿದಂತೆ ಸಾಮಾಜಿಕ ಭದ್ರತೆ ಒದಗಿಸಬೇಕು. ಎಲ್ಲ ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಗುಣಮಟ್ಟದ ಪೌಷ್ಟಿಕ ಆಹಾರ, ಮೂಲ ಸೌಕರ್ಯ, ಡಿಜಿಟಲ್ ಸಾಧನಗಳು ಹಾಗೂ ಮೊಬೈಲ್ ಡೇಟಾ ವೆಚ್ಚ ಮರುಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.