ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಜಿಲ್ಲಾಡಳಿತದಿಂದ ಈಚೇಗೆ ಸಭೆ ಮಾಡಲಾಗಿದೆ. ಬೀದಿ ನಾಯಿಗಳಿಗೆ ಆಹಾರ ಹಾಕುವವರು ಹಾಗೂ ಮಟನ್ ಅಂಗಡಿಗಳ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುವವರಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು. ಮಟನ್ ತ್ಯಾಜ್ಯ ಸಾಗಿಸುವ ವಾಹನಗಳ ಮೇಲೂ ನಿಯಮ ಉಲ್ಲಂಘನೆ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುದು. ಪೂವಿತಾ ಎಸ್. ಜಿಲ್ಲಾಧಿಕಾರಿ ರಾಯಚೂರು
- 6 ತಿಂಗಳಲ್ಲಿ 1651 ಪ್ರಕರಣ ದಾಖಲು
- ದಾಳಿಯಲ್ಲಿ ಮಕ್ಕಳೆ ಟಾರ್ಗೆಟ್
ರಾಯಚೂರು ಬಿಸಿಲನಾಡು ರಾಯಚೂರು ಜಿಲ್ಲಾಧ್ಯಂತ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಜನರ ನೆಮ್ಮದಿಗೆ ಭಂಗ ತಂದಿದೆ. ಹೋಟೆಲ್, ಎಗ್‌ರೈಸ್ ಅಂಗಡಿ ಸೇರಿದಂತೆ ಇತರ ಉಪಹಾರ ಕೇಂದ್ರಗಳಲ್ಲಿ ಉಳಿಯುವ ಅಡುಗೆಯೇ ಈ ಬೀದಿನಾಯಿಗಳಿಗೆ ಆಹಾರದ ಮೂಲವಾಗುತ್ತಿದೆ. ಜನದಟ್ಟಣೆ ಪ್ರದೇಶದಲ್ಲಿ ನಾಯಿಗಳ ಹಿಂಡು ದೊಡ್ಡದಾಗುತ್ತ ಸಾಗಿದ್ದು ತಲೆನೋವಾಗಿದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಕ್ಕಳು ಗಾಯಗೊಳ್ಳುತ್ತಿರುವುದು ಹಾಗೂ ಕೆಲ ಪ್ರಕರಣಗಳಲ್ಲಿ ಸಾವನ್ನಪ್ಪಿರುವ ಘಟನೆಗಳು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ನಾಯಿಗಳ ಕಡಿತದ ಪ್ರಕರಣ ತಿಂಗಳಿಗೆ 250-300 ದಾಟುತ್ತಿದ್ದು ಹತೋಟಿಗೆ ಸವಾಲಾಗಿದೆ. ಮಕ್ಕಳು ಹಾಗೂ ವಯೋವೃದ್ಧರು ಹೆಚ್ಚಾಗಿ ನಾಯಿಗಳ ದಾಳಿಗೆ ಗುರಿಯಾಗುತ್ತಿದ್ದು, ಬೆಳಿಗ್ಗೆ ಒಂಟಿಯಾಗಿ ವಾಯು ವಿಹಾರಕ್ಕೆ ಹೋಗಲು ಹಾಗೂ ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಮನೆ ಸೇರಲು ಭಯ ಪಡುವಂತಾಗಿದೆ. ಪ್ರಮುಖ ಬೀದಿಗಳಲ್ಲಿ ಹಿಂಡು ಹಿಂಡಾಗಿ ನಾಯಿಗಳು ಓಡಾಡುತ್ತಿರುವುದರಿಂದ ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿದೆ. ಒಂದು ನಾಯಿ ಬೊಗಳಿದಾಗ ಉಶ್ ಎಂದರೆ ಸಾಕು ನಾಯಿಗಳ ಹಿಂಡು ಮೈಮೇಲೆ ಎಗರುತ್ತಿವೆ.
ಮಕ್ಕಳ ಮೇಲೆ ದಾಳಿ
ಜಿಲ್ಲೆಯ ಸಿಂಧನೂರಿನಲ್ಲಿ ಇಚೇಗೆ ಮನೆಯ ಮುಂದೆ ಪಾಲಕರೊಂದಿಗೆ ಸೀರಿಯ ಜೋಳಿಗೆಯಲ್ಲಿ ಮಲಗಿದ್ದ 1.5 ವರ್ಷದ ಹೆಣ್ಣು ಮಗುವಿನ ಮೇಲೆ ದಾಳಿ ಮಾಡಿ ಸಾವಿನ ಪ್ರಕರಣ ಮಾಸುವ ಮುನ್ನವೆ ರಾಯಚೂರು ತಾಲೂಕಿನ ಮಲಿಯಾಬಾದ್ ಗ್ರಾಮದ ಬಳಿ ಆಟವಾಡುತ್ತಿದ್ದ ಮಗುವಿನ ಮೇಲೆ ದಾಳಿ ಮಾಡಿದ್ದು ತಲೆಯ ಕೂದಲು ಕಿತ್ತು ಬಂದಿದ್ದು ನವೋದಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಗಂಭೀರವಾಗಿದೆ.
6 ತಿಂಗಳಲ್ಲಿ 1651 ಪ್ರಕರನ ದಾಖಲು
ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲಿ 1651 ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು, ನಗರದ ರಿಮ್ಸ್ ಆಸ್ಪತ್ರೆಗೆ ತಿಂಗಳಿಗೆ ಸುಮಾರು 250-300 ನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆಗೆ ಬರುತ್ತಿದ್ದಾರೆ. ಜನವರಿಯಿಂದ ಜುಲೈ 21 ವರೆಗೆ 1651ಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣ ದಾಖಲಾಗಿವೆ. ಈ ಪೈಕಿ ಜನವರಿಯಲ್ಲಿ 285, ಫೆಬ್ರುವರಿ 232, ಮಾರ್ಚ್ 257 ಹಾಗೂ ಏಪ್ರಿಲ್‌ನಲ್ಲಿ ಅತಿ ಹೆಚ್ಚು 365 ಪ್ರಕರಣಗಳು ಹಾಗೂ ಮೇ ಜೂನ್‌ನಲ್ಲಿ ತಲಾ 250 ಪ್ರಕರಣಗಳು ದಾಖಲಾಗಿವೆ. ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ತಪ್ಪಿರುವುದರಿಂದ ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಭಾಗಗಳಲ್ಲಿಯೂ ಜನರಲ್ಲಿ ಆತಂಕ ಹೆಚ್ಚಾಳವಾಗಿದ್ದು, ಈ ಪೈಕಿ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ ಎಂದು ರಿಮ್ಸ್ ಬೋಧಕ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ
ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಷಾಗಿದ್ದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಇಚೇಗೆ ಮಹಾನಗರ ಪಾಲಿಕೆ,ಆರೋಗ್ಯ ಇಲಾಖೆ, ಕಂದಾಯ ಇಲಾಖೆಯನ್ನು ಒಳಗೊಂಡ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ. ಬೀದಿ ನಾಯಿಗಳಿಂದ ಮಕ್ಕಳು ಹಾಗೂ ಸಾರ್ವಜನಿಕರ ಮೇಲೆ ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿರುವ ದಾಳಿ ಪ್ರಕರಣಗಳನ್ನು ತಡೆಗಟ್ಟಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮರು ಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕಟ್ಟು ನಿಟ್ಟಾಗಿ ಸೂಚನೆ ನೀಡಿದ್ದಾರೆ. ಬೀದಿ ನಾಯಿಗಳನ್ನು ಹಿಡಿಯುವ ಹಾಗೂ ಅವುಗಳ ನಿರ್ವಹಣೆಯ ಎಲ್ಲಾ ಕ್ರಮಗಳನ್ನು ವೈಜ್ಞಾನಿಕ ಹಾಗೂ ವ್ಯವಸ್ಥಿತ ರೀತಿಯಲ್ಲಿ, ಸುಪ್ರೀಂ ಕೋರ್ಟ್ ಆದೇಶಗಳ ಅನ್ವಯ ಮಾಡಬೇಕು. ಸಾರ್ವಜನಿಕರು ಬೀದಿ ನಾಯಿಗಳಿಗೆ ಯಾವುದೇ ರೀತಿಯಲ್ಲಿ ಆಹಾರವನ್ನು ನೀಡಬಾರದು ಮತ್ತು ಸುಪ್ರೀಂಕೋರ್ಟ್ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.