ಲಿಂಗಸುಗೂರಿನಲ್ಲಿ ಎಸಿ ಕಚೇರಿ ಎಫ್‌ಡಿಎ ಅನುಪಮಾ ಸಿಂಗ್‌ಗೆ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟ ಮನವಿ ಸಲ್ಲಿಸಿತು.  
ರಾಯಚೂರು

ಆದಾಯ ಮಿತಿ 1.20 ಲಕ್ಷ ರೂ. ಇರಲಿ

ಲಿಂಗಸುಗೂರು: ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿ 32 ಸಾವಿರ ರೂ. ನಿಗದಿ ಖಂಡಿಸಿ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟದಿಂದ ಸೋಮವಾರ ಎಸಿ ಕಚೇರಿಯ ಎಫ್‌ಡಿಎ ಅನುಪಮಾ ಸಿಂಗ್‌ಗೆ ಮನವಿ ಸಲ್ಲಿಸಲಾಯಿತು.
ಕುಟುಂಬದ ವಾರ್ಷಿಕ ವರಮಾನ ಮಿತಿ 32 ಸಾವಿರ ರೂ. ಮಾಡಿದರೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಅಂಗವಿಕಲರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದಿದೆ. ಅವೈಜ್ಞಾನಿಕ ಆದಾಯ ಮಿತಿ ಹೇರಿಕೆಯಿಂದ ಮಾಸಾಶನ ನಿಲುಗಡೆ ಮಾಡಲಾಗುತ್ತಿದೆ. 
ಇಂಥ ಸ್ಥಿತಿಯಲ್ಲಿ ಪ್ರಯಾಣ, ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗಲ್ಲ. ಆದ್ದರಿಂದ ಈ ಮಾನದಂಡಗಳನ್ನು ಕೂಡಲೇ ರದ್ದು ಮಾಡಿ ಕನಿಷ್ಠ ಬಿಪಿಎಲ್ ಕಾರ್ಡ್‌ಗೆ ಅನ್ವಯಿಸುವ 1.20 ಲಕ್ಷ ರೂ. ಆದಾಯ ಮಿತಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ತಾಲೂಕು ಅಧ್ಯಕ್ಷ ರಾಮಣ್ಣ ಸರ್ಜಾಪುರ, ನವಜೀವನ ಅಂಗವಿಕಲರ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಸುರೇಂದ್ರ, ಪಾಲಕರ ಒಕ್ಕೂಟದ ಕಾರ್ಯದರ್ಶಿ ಪರಶುರಾಮ ಗೊರೇಬಾಳ, ಶ್ರೀದೇವಿ, ಶ್ರೀಲತಾ, ವನಜಾಕ್ಷಿ, ಮಾಬುಬಿ, ಸಮೀರ್, ಮುಕ್ತುಂ ಪಾಷಾ, ಖಯಾಮಿ ಪಾಷಾ, ಅಜಗರ, ರವಿಕುಮಾರ, ಸಂಗಮೇಶ, ನೂರ್‌ಜಹಾನ್ ಬೇಗಂ, ಸೌಭಾಗ್ಯ ಶರಣಬಸವ, ಈರಣ್ಣ ಇತರರಿದ್ದರು.