ಕೊತ್ತೊದೊಡ್ಡಿ ಗ್ರಾಮದಲ್ಲಿ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಬೋನು ಅಳವಡಿಸಿದರು. ಸಿಬ್ಬಂದಿ ಸಗರಪ್ಪ, ಅಂಜಿನಯ್ಯ, ಸಂಗಮೇಶ ಇತರರಿದ್ದರು. 
ರಾಯಚೂರು

ಕೊತ್ತದೊಡ್ಡಿಯಲ್ಲಿ ಚಿರತೆ ಸೆರೆಗೆ ಬೋನು ಅಳವಡಿಕೆ

ನರೇಶ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ಚಿರತೆ ಸೆರೆಗೆ ಬೋನು
  • ಕೊತ್ತದೊಡ್ಡಿಯಲ್ಲಿ ಅಳವಡಿಕೆ
  • ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ
ಅರಕೇರಾ: ತಾಲೂಕಿನ ಕೊತ್ತದೊಡ್ಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಹತ್ತಿರ ಶನಿವಾರ ಹಸುವಿನ ಮೇಲೆ ದಾಳಿ ಮಾಡಿ ಕೊಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಬೋನು ಅಳವಡಿಸಿದ್ದಾರೆ. 
ದೇವದುರ್ಗ ವಲಯ ಅರಣ್ಯಾಧಿಕಾರಿ ಮೊಹಮ್ಮದ್ ಅಲಿವುದ್ದೀನ್ ನೇತೃತ್ವದ ತಂಡ ಭಾನುವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ, ಚಿರತೆಯ ಚಲನವಲನದ ಮೇಲೆ ನಿಗಾವಹಿಸಲು ಘಟನಾ ಸ್ಥಳದ ಸುತ್ತ ಸಿಸಿ ಕ್ಯಾಮರಾಗಳನ್ನು ಅಳವಡಿಸಿತು. ತದನಂತರ ಭಾನುವಾರ ರಾತ್ರಿ 11 ಗಂಟೆಯಿಂದ ಸೋಮವಾರ ಬೆಳಗಿನ ಜಾವದವರೆಗೆ ಚಿರತೆ ಸುಮಾರು ಮೂರು ಬಾರಿ ಸ್ಥಳಕ್ಕೆ ಬಂದು, ಬಲಿ ಪಡೆದ ಹಸುವಿನ ಮಾಂಸವನ್ನು ಮತ್ತೆ ತಿಂದು ಹೋಗಿದೆ ಎನ್ನಲಾಗಿದೆ. 
ಹೀಗಾಗಿ ಚಿರತೆ ಸೆರೆ ಹಿಡಿಯುವ ಉದ್ದೇಶದಿಂದ ಸೋಮವಾರ ಬೆಳಗ್ಗೆ ಬೋನು ಅಳವಡಿಸಿದ್ದಾರೆ. ಘಟನೆ ಬಳಿಕ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮ ಪಂಚಾಯಿತಿ ವತಿಯಿಂದ ಡಂಗುರ ಸಾರಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಪಶುಗಳನ್ನು ರಾತ್ರಿ ಹೊತ್ತು ಹೊರಗೆ ಬಿಡಬಾರದು, ಮಕ್ಕಳನ್ನು ಶಾಲೆಗೆ ಹೋಗುವ ಮತ್ತು ಬರುವ ಸಮಯದಲ್ಲಿ ಎಚ್ಚರಿಕೆವಹಿಸಬೇಕು. 
ಚಿರತೆ ಸೆರೆಗೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸಗರಪ್ಪ, ಅಂಜಿನಯ್ಯ, ಸಂಗಮೇಶ ಇತರರಿದ್ದರು.