ಮುದಗಲ್‌ನಲ್ಲಿ ಶಿಕ್ಷಣ ಇಲಾಖೆಯಿಂದ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಿತು.  
ರಾಯಚೂರು

ಕ್ರೀಡೆಯಿಂದ ದೈಹಿಕ-ಮಾನಸಿಕ ಸಾಮರ್ಥ್ಯ ವೃದ್ಧಿ

ಮುದಗಲ್ : ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸುವುದರ ಮೂಲಕ ಕ್ರೀಡಾಪಟುಗಳು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. ಸ್ಪರ್ಧಾ ಮನೋಭಾವನೆಯಿಂದ ಕ್ರೀಡೆಯಲ್ಲಿ ಭಾಗಿಯಾಗಬೇಕೆಂದು ಶಿಕ್ಷಕ ಮಲ್ಲಿಕಾರ್ಜುನ ಗೌಡರ ಸಲಹೆ ನೀಡಿದರು.

ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ 14 ಹಾಗೂ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಕ್ರೀಡಾಕೂಟದಲ್ಲಿ ಆಟಗಾರರು ಗೆಲುವಿಗಾಗಿ ಉತ್ತಮ ಪೈಪೋಟಿ ನೀಡುವುದರೊಂದಿಗೆ ನಿರ್ಣಾಯಕರ ನಿರ್ಣಯಕ್ಕೂ ತಲೆಬಾಗಬೇಕು. ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಯಾಗುವುದರೊಂದಿಗೆ ಶಿಸ್ತು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಪ್ರಮುಖರಾದ ರಾಘವೇಂದ್ರ ಗುಮಾಸ್ತೆ, ಡಾ.ಮಂಜುನಾಥ ಪಿಕಳಿಹಾಳ, ನವನೀತ ಜೈನ್, ವೀರಭದ್ರಪ್ಪ ಕೊಳ್ಳಿ, ಇಸ್ಮಾಯಿಲ್ ಬಾರಿಗಿಡ, ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಎನ್.ಅಕ್ಕಿ, ರಮೇಶ ದೀಕ್ಷಿತ್, ಸುಜಿತ್ ಆನಂದ್, ಮಲ್ಲಿಕಾರ್ಜುನಯ್ಯ, ವಿಶ್ವನಾಥ ತೋಟಿ, ಶರಬಣ್ಣ ಮಸ್ಕಿ ಇತರರಿದ್ದರು.