ಸಿಂಧನೂರಿನಲ್ಲಿ ತಾಲೂಕು ಪಂಚಾಯಿತಿ ಇಒ ಚಂದ್ರಶೇಖರಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪಿಡಿಒಗಳಾದ ಸಿ.ಎಚ್.ಮುದುಕಪ್ಪ, ಜಯಶ್ರೀ, ಪ್ರಕಾಶ ಪಾಟೀಲ್, ವೆಂಕಪ್ಪ ಇದ್ದರು. 
ರಾಯಚೂರು

ಪಿಡಿಒಗಳ ರಕ್ಷಣೆಗೆ ವಿಶೇಷ ನೀತಿ ಜಾರಿಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ಕರ್ತವ್ಯದ ವೇಳೆ ಒತ್ತಡ ಹೇರದೆ ಇರಿ
  • ಸಿಂಧನೂರು ತಾಪಂ ಇಒಗೆ ಸಂಘದಿಂದ ಮನವಿ
ಸಿಂಧನೂರು: ಕರ್ತವ್ಯದ ವೇಳೆ ಯಾವುದೇ ಒತ್ತಡ ಹೇರದೆ ಸುರಕ್ಷಿತ ವಾತಾವರಣ ಹಾಗೂ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ನಗರದಲ್ಲಿ ತಾಪಂ ಇಒ ಚಂದ್ರಶೇಖರಗೆ ಮನವಿ ಸಲ್ಲಿಸಿದರು.
ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಘನತೆ ಮತ್ತು ಸುರಕ್ಷತೆಯೊಂದಿಗೆ ಬದುಕುವ ಹಕ್ಕನ್ನು ನೀಡಿದೆ. ಗ್ರಾಮೀಣಾಭಿವೃದ್ಧಿಯ ಆಡಳಿತ ಯಂತ್ರದಲ್ಲಿ ಮುಂಚೂಣಿ ಸೈನಿಕರಂತೆ ಕೆಲಸ ಮಾಡುತ್ತಿರುವ ಅಭಿವೃದ್ಧಿ ಅಧಿಕಾರಿಗಳು ಅಭದ್ರತೆ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ರೋಣ ತಾಲೂಕಿನ ಅಸೂಟಿ ಹಾಗೂ ಕೊತಬಾಳ ಗ್ರಾಪಂಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಒ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ಈ ಘಟನೆಗಳು ಮರುಕಳಿಸದಂತೆ ಕ್ರಮವಹಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಪಿಡಿಒಗಳ ರಕ್ಷಣೆಗಾಗಿ ವಿಶೇಷ ರಕ್ಷಣಾ ನೀತಿ ಜಾರಿಗೊಳಿಸಬೇಕು. ಪಿಡಿಒ ಮುಕ್ತುಂಹುಸೇನ ಸಾವಿನ ತನಿಖೆಗೆ ಸಿಬಿಐ, ಎಸ್‌ಐಟಿಗೆ ವಹಿಸಿ ಸತ್ಯಾಂಶ ಹೊರತರಬೇಕು. ಮೃತ ಅಧಿಕಾರಿಗಳ ಕುಟುಂಬಗಳಿಗೆ ಕನಿಷ್ಠ 50 ಲಕ್ಷ ರೂ. ವಿಶೇಷ ಆರ್ಥಿಕ ನೆರವು ಮತ್ತು ಅನುಕಂಪದ ನೇಮಕಾತಿ ಒದಗಿಸಲು ರಾಜ್ಯ ಆರ್‌ಡಿಪಿಆರ್ ನಿಧಿ ಸ್ಥಾಪಿಸಬೇಕು. 14 ವರ್ಷಗಳಿಂದ ಬಾಕಿ ಇರುವ ಬಡ್ತಿಯನ್ನು ತಕ್ಷಣ ಪೂರೈಸಿ, ಕೆಲಸದ ಒತ್ತಡ ಕಡಿಮೆ ಮಾಡಲು ಸಮಿತಿ ರಚಿಸಿ ವರದಿ ಪಡೆಯಬೇಕೆಂದು ಆಗ್ರಹಿಸಿದರು.