ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಹಾಗೂ ಸದಸ್ಯರಾದ ಎಸ್.ಕೆ ವಂಟಿಗೋಡಿ ಬುಧವಾರ ರಾಯಚೂರಿನ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದರು. ಪಾಲಿಕೆ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಾ, ತಹಸೀಲ್ದಾರ ಸುರೇಶ ವರ್ಮಾ, ತಾಪಂ ಇಓ ಚಂದ್ರಶೇಖರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರವೀಣಕುಮಾರ ಇದ್ದರು.
ರಾಯಚೂರು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಹಾಗೂ ಸದಸ್ಯರಾದ ಎಸ್.ಕೆ ವಂಟಿಗೋಡಿ ಬುಧವಾರ ನಗರದ ವಿವಿಧೆಡೆ ಮಿಂಚಿನ ಸಂಚಾರ ನಡೆಸಿದರು.
ಮೊದಲಿಗೆ ರಂಗಮಂದಿರ ಹತ್ತಿರದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ, ವಸತಿ ನಿಲಯಗಳ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅಹವಾಲು ಆಲಿಸಿದರು. ಸ್ನಾನಕ್ಕೆ ಬಿಸಿನೀರು ಸಿಗುತ್ತಾ? ಸೋಪುಕಿಟ್ ಕೊಡುತ್ತಾರಾ? ವೈದ್ಯರು ನಿಯಮಿತ ಭೇಟಿ ಕೊಡುತ್ತಾರಾ? ಸ್ಕೂಲ್ ಬಸ್ ಬರುತ್ತಾ? ಊಟ ಸರಿಯಾಗಿ ಕೊಡುತ್ತಾರಾ? ಸಿಸಿ ಟಿವಿ ಇದೆನಾ? ಎಂದು ಕೇಳಿ ಮಾಹಿತಿ ಪಡೆದುಕೊಂಡರು. ಸದ್ಯ ಒಂದು ಕೋಣೆಯಲ್ಲಿ ಐದಾರು, ಆರೇಳು ಜನ ವಿದ್ಯಾರ್ಥಿನಿಯರಿದ್ದು, ಇಕ್ಕಟ್ಟಾಗಿವೆ. ವಿದ್ಯಾರ್ಥಿಗಳ ಸಂಖ್ಯೆಗ್ನುಸಾರ ರೂಮಿನ ವ್ಯವಸ್ಥೆಯಾಗಬೇಕಿದೆಂದು ಹಾಸ್ಟೆಲ್ ವಾರ್ಡನ್ ಅವರು ತಿಳಿಸಿದರು.
ಬಳಿಕ ಕೇಂದ್ರ ಬಸ್ ನಿಲ್ದಾಣದ ಆವರಣಕ್ಕೆ ಭೇಟಿ ನೀಡಿದರು. ಬಸ್‌ಗಳು ಸರಿಯಾಗಿ ಬರುತ್ತಾ? ಮಧ್ಯೆ ಟ್ರಿಪ್ ನಿಲ್ಲಸ್ತಾರಾ? ಎಂದು ಪ್ರಯಾಣಿಕರಿಗೆ ಕೇಳಿದರು. ರಾಯಚೂರು-ಲಿಂಗಸೂರ ಮಧ್ಯೆ ಸರಿಯಾದ ಬಸ್ಸಿನ ಸೌಕರ್ಯ ಇಲ್ಲ. ಡಿಪೋಗಳಿಂದ ಬಸಗಳನ್ನು ಸರಿಯಾಗಿ ಬಿಡುತ್ತಿಲ್ಲ. ತಡೆರಹಿತ ಬಸ ಬಿಟ್ಟು ವಿದ್ಯಾರ್ಥಿಗಳ ಪಾಸಿಗೆ ಅವಕಾಶ ನೀಡುತ್ತಿಲ್ಲ. ರಾಯಚೂರ-ಮಾನ್ವಿ ಮಧ್ಯೆ ಸಾಕಷ್ಟು ಬಸಗಳು ಪ್ರತಿನಿತ್ಯ ಓಡಾಡಿದರು ನೀರಮಾನ್ವಿಯಂತ ಕಡೆಗೆ ನಿಲ್ಲುವುದಿಲ್ಲ. ಬರೀತಡೆ ರಹಿತ ಬಸ್ ಓಡಿಸುತ್ತಾರೆ ಎಂದು ಪ್ರಯಾಣಿಕರು ದೂರಿದರು. ಜಿಲ್ಲಾಧಿಕಾರಿಗಳೊಂದಿಗೆ ನಡೆಸುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಅಧ್ಯಕ್ಷರು ತಿಳಿಸಿದರು.
ಬಳಿಕ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದರು. ಅಲ್ಲಿನ ಕೈದಿಗಳ ಸೆಲಗಳಿಗೆ ಪ್ರವೇಶಿಸಿ, ಕೇಸಗಳು ಸರಿಯಾಗಿ ಆಗುತ್ತಾ? ವಕೀಲರು ಇಲ್ಲದೇ ಇರುವವರು ಇದ್ದೀರಾ? ಆರೋಗ್ಯ ತಪಾಸಣೆ ಮಾಡ್ತಾರಾ? ಹಾಸಿಗೆ ನೀಡಿದ್ದಾರಾ? ಎಂದು ಕೇಳಿದರು. ಪಾತ್ರೆ ತೊಳೆದು ಬಳಸಲು ಅಡುಗೆದಾರರಿಗೆ ತಿಳಿಸಿದರು. ಮಹಿಳಾ ಖೈದಿಗಳ ಸೆಲ್ಗೆ ಭೇಟಿ ನೀಡಿ ಅಹವಾಲು ಆಲಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಾ, ತಹಸೀಲ್ದಾರ ಸುರೇಶ ವರ್ಮಾ, ತಾಪಂ ಇಓ ಚಂದ್ರಶೇಖರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರವೀಣಕುಮಾರ ಸೇರಿ ಅನೇಕರು ಇದ್ದರು.