ಮಾನ್ವಿ ತಾಲೂಕಿನ ದದ್ದಲ್ ಗ್ರಾಮದಲ್ಲಿ ಅರ್ಧಕ್ಕೆ ನಿಂತಿರುವ ನೀರಾವರಿ ಯೋಜನೆ.
- ದದ್ದಲ್-ಮದ್ಲಾಪುರ ಯೋಜನೆಗೆ ಅನುದಾನ ಸಚಿವ ಸಂಪುಟ ಅನುಮೋದನೆ
- ರೈತರ ಕನಸು ನನಸು
- ದದ್ದಲ್ ಏತ ನೀರಾವರಿ ಯೋಜನೆಗೆ 34 ಕೋಟಿ ರೂ.
- ಮದ್ಲಾಪುರ ಏತ ನೀರಾವರಿಗೆ 21 ಕೋಟಿ ರೂ.
ಮಾನ್ವಿ: ತಾಲೂಕಿನ ದದ್ದಲ್ (ಗೌರಮ್ಮ ಬಂಡಿ) ಮತ್ತು ಮದ್ಲಾಪುರ ಏತ ನೀರಾವರಿ ಯೋಜನೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇನ್ನೊಂದು ವಾರದಲ್ಲಿ ಟೆಂಡರ್ ಕರೆಯುವ ಸಾಧ್ಯತೆ ಇದ್ದು, ಕೃಷಿಕರಲ್ಲಿ ಸಂತಸ ಮನೆ ಮಾಡಿದೆ.
ದದ್ದಲ್ ಗ್ರಾಮದ (ಗೌರಮ್ಮ ಬಂಡಿ) ಏತ ನೀರಾವರಿ ಕಾಮಗಾರಿ ಕಳೆದ 25 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ರೈತರ ಕನಸು ನನಸಾಗದೆ ಚಿಂತೆಗೀಡಾಗಿದ್ದರು. ಈಗ ರಾಜ್ಯ ಸಚಿವ ಸಂಪುಟದಲ್ಲಿ ದದ್ದಲ್ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು 34 ಕೋಟಿ ರೂ. ಮತ್ತು ಮದ್ಲಾಪುರ ಏತ ನೀರಾವರಿಗೆ 21 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಿರುವುದು ರೈತರಲ್ಲಿ ಉತ್ತಮ ಇಳುವರಿ ಪಡೆಯುವ ಆಸೆ ಚಿಗುರಿದೆ.
ತುಂಗಭದ್ರಾ ನದಿ ಪಕ್ಕದಲ್ಲಿಯೇ ದದ್ದಲ್ ಏತ ನೀರಾವರಿ ಯೋಜನೆ ಕಾಮಗಾರಿಗೆ 1998ರಲ್ಲಿ ಆಗಿನ ಶಾಸಕ ಗಂಗಾಧರ ನಾಯಕ ಚಾಲನೆ ನೀಡಿದ್ದರು. ಸುಮಾರು 4.85 ಕೋಟಿ ರೂ. ಮೊತ್ತದ ಯೋಜನೆ ಇದಾಗಿದ್ದು, ಒಟ್ಟು 3600 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಉದ್ದೇಶ ಹೊಂದಲಾಗಿತ್ತು.
ದದ್ದಲ್, ಉಮಳಿಪನ್ನೂರು, ಕೊರವಿ, ಸಾದಪುರ ಸೇರಿ ಇತರ ಗ್ರಾಮಗಳ ರೈತರಿಗೆ ಯೋಜನೆ ಅನುಕೂಲವಾಗಲಿದೆ. ಆದರೆ, ಅನುದಾನದ ಕೊರತೆ ಮತ್ತು ಜನಪ್ರತಿನಿಧಿಗಳ ನಿರಾಸಕ್ತಿ, ಅಧಿಕಾರಿಗಳ ನಿರ್ಲಕ್ಷೃದಿಂದ ಕಾಮಗಾರಿ ಅರ್ಧಕ್ಕೆ ನಿಂತಿತು. ಬಳಿಕ ಎನ್.ಎಸ್. ಬೋಸರಾಜು ಶಾಸಕರಾದ ನಂತರ ದದ್ದಲ್ ಏತ ನೀರಾವರಿ ಯೋಜನೆ ಆರಂಭಿಸಿ, ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ನೀರೆತ್ತುವ ಮೋಟಾರ್, ವಿದ್ಯುತ್ ಪರಿವರ್ತಕಗಳು ಸೇರಿ ಇತರ ಸಲಕರಣೆ ಒದಗಿಸಿದರು. ಪೈಪ್‌ಲೈನ್, ಜಾಕ್‌ವೆಲ್ ಫಿಟ್ಟಿಂಗ್ ಕಾಮಗಾರಿ ಮುಗಿಸಲಾಯಿತು. ಆದರೆ, ವಿದ್ಯುತ್ ಸಂಪರ್ಕ ಕೆಲಸ ಬಾಕಿ ಇರುವಾಗಲೇ ಯೋಜನೆಗೆ ಗ್ರಹಣ ಬಡಿದು, ರೈತರು ನೀರಾವರಿ ಆಸೆ ಕೈಬಿಟ್ಟಿದ್ದರು. ಇದೀಗ ಯೋಜನೆಗೆ ಮರು ಜೀವ ಬಂದಿದ್ದು, ಮತ್ತೆ ನಿರೀಕ್ಷೆ ಗರಿಗೆದರಿದೆ.
ಇನ್ನು ತುಂಗಭದ್ರಾ ಎಡದಂಡೆ ನಾಲೆಯ ವಿತರಣಾ ಕಾಲುವೆ ನಂ.85 ರಡಿ ಬರುವ ಅಚ್ಚುಕಟ್ಟು ಪ್ರದೇಶದಲ್ಲಿ 1154 ಹೆಕ್ಟೇರ್ ಪ್ರದೇಶಕ್ಕೆ ತುಂಗಭದ್ರಾ ನದಿಯಿಂದ ಮದ್ಲಾಪುರ ಕೆರೆಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸಿ ನೀರಾವರಿ ಸೌಲಭ್ಯ ಮತ್ತು ಅಂತರ್ಜಲ ಮಟ್ಟ ವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಆದರೆ, ಅನುದಾನ ಕೊರತೆಯಿಂದ ಯೋಜನೆ ನನೆಗುದ್ದಿಗೆ ಬಿದ್ದಿತ್ತು. ಸದ್ಯ ಮದ್ಲಾಪುರ ಏತ ನೀರಾವರಿ ಯೋಜನೆಯ ಬಾಕಿ ಉಳಿದಿರುವ ಬಾಕಿ ಕೆಲಸ ಹಾಗೂ ನೀರಾವರಿ ಯೋಜನೆಯ ಕಾಮಗಾರಿ ಪುನರುಜ್ಜಿವನ ಕೈಗೊಳ್ಳಲು 21 ಕೋಟಿ ರೂ.ಗೆ ಅನುಮೋದನೆ ನೀಡಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.
ತುಕ್ಕು ಹಿಡಿದಿವೆ ಯಂತ್ರಗಳು
ಅನುದಾನದ ಕೊತೆಯಿಂದ ಏತ ನೀರಾವರಿ ಯೋಜನೆಗೆ ಜೋಡಿಸಿದ ವಿದ್ಯುತ್ ಯಂತ್ರಗಳಿಗೆ ತುಕ್ಕು ಹಿಡಿದಿದೆ. ವಿದ್ಯುತ್ ಬಾಕ್ಸ್‌ಗಳು ಹಾಳಾಗಿವೆ. ನೀರೆತ್ತುವ ಮೋಟರ್ ಕೇಬಲ್ ವೈರ್‌ಗಳು ತುಂಡಾಗಿವೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಾಕ್ಸ್‌ಗಳು ನೋಡಿದರೆ ಕೋಟಿಗಟ್ಟಲೇ ಹಣ ನೀರು ಪಾಲಾಗಿದೆ. ಕಾಮಗಾರಿ ಪಡೆದ ಗುತ್ತಿಗೆದಾರರಿಗೆ ಕಪ್ಪು ಪಟ್ಟಿಗೆ ಸೇರಿಸಲು ರಾಯಚೂರು ಗ್ರಾಮಿಣ ಶಾಸಕ ಬಸನಗೌಡ ದದ್ದಲ್ ಸದನದಲ್ಲಿ ಒತ್ತಾಯಿಸಿದ್ದರು.
ದದ್ದಲ್ (ಗೌರಮ್ಮ ಬಂಡಿ) ಮತ್ತು ಮದ್ಲಾಪುರ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಇನ್ನೊಂದು ವಾರದಲ್ಲಿ ಟೆಂಡರ್ ಕರೆಯಲಾಗುವುದು. ಎರಡು ಯೋಜನೆಗಳಿಂದ ರೈತರು ನೀರಾವರಿ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ. ಅದಷ್ಟು ಬೇಗ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ದದ್ದಲ್ ಏತ ನೀರಾವರಿ ಯೋಜನೆಯಿಂದ 20 ವರ್ಷಗಳ ಹಿಂದೆಯೇ ರೈತರ ಹೊಲಗಳಿಗೆ ನೀರು ಹರಿಯಬೇಕಿತ್ತು. ಆದರೆ, ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಏತ ನೀರಾವರಿ ಆಸೆ ಕೈಬಿಡಲಾಗಿತ್ತು. ಆದರೆ, ಸಚಿವ ಸಂಪುಟ ಹಣ ಬಿಡುಗಡೆಗೆ ಅನುಮೋದನೆ ನೀಡಿದ್ದು, ಸಂತೋಷದ ಸಂಗತಿ. ಈಗಲಾದರೂ ಯೋಜನೆ ಪೂರ್ಣಗೊಳಿಸಿ ರೈತರ ಹೊಲಗಳಿಗೆ ನೀರು ಹರಿಸಿದರೆ ಒಳ್ಳೆಯದು.