ಸಿಂಧನೂರಿನ ಪಿಡಬ್ಲೃಡಿ ಕ್ಯಾಂಪ್‌ನಲ್ಲಿರುವ ಡಾ.ಅಂಬೇಡ್ಕರ್ ಮೆಟ್ರಿಕ್ ನಂತರದ ವೃತ್ತಿಪರ ವಿದ್ಯಾರ್ಥಿನಿಯರ ಹಾಸ್ಟೆಲ್‌ನ ಚರಂಡಿ ನೀರು ಉದ್ಯಾನಕ್ಕೆ ಹರಿಯುತ್ತಿರುವುದು. 
ರಾಯಚೂರು

ಹಾಸ್ಟೆಲ್ ಚರಂಡಿ ನೀರು ಉದ್ಯಾನಕ್ಕೆ

ಪ್ರಮುಖ ಮುಖ್ಯಾಂಶಗಳು

  • ಸಾಂಕ್ರಾಮಿಕ ರೋಗ ಹರಡುವ ಭೀತಿ
  • ಸಿಂಧನೂರು ದುರ್ವಾಸನೆ ಹಾಗೂ ಸೊಳ್ಳೆ ಕಾಟ
ಸಿಂಧನೂರು: ನಗರದ ಪಿಡಬ್ಲೃಡಿ ಕ್ಯಾಂಪ್‌ನ ಜಯನಗರ 4ನೇ ಅಡ್ಡರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ವೃತ್ತಿಪರ ವಿದ್ಯಾರ್ಥಿನಿಯರ ಹಾಸ್ಟೆಲ್‌ನ ಚರಂಡಿ ನೀರನ್ನು ಉದ್ಯಾನಕ್ಕೆ ಹರಿಸಲಾಗುತ್ತಿದೆ. ಇದರಿಂದ ಹೊಂಡ ನಿರ್ಮಾಣವಾಗಿ ದುರ್ನಾತ ಹರಡಿ ಸುತ್ತಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಹಾಸ್ಟೆಲ್‌ನ ಸ್ನಾನಗೃಹದ ನೀರು ಹಾಗೂ ಇತರ ಬಳಕೆ ನೀರು ಸುಗಮವಾಗಿ ಹೊರಹೋಗಲು ಚರಂಡಿ ವ್ಯವಸ್ಥೆಯನ್ನು ಕಲ್ಪಿಸದೇ ಪೈಪ್ ಮೂಲಕ ವಸತಿ ನಿಲಯದ ಪಕ್ಕದಲ್ಲಿರುವ ಸಾರ್ವಜನಿಕ ಉದ್ಯಾನಕ್ಕೆ ಹರಿಬಿಡಲಾಗುತ್ತಿದೆ. ಉದ್ಯಾನದಲ್ಲಿ ಕೊಳಚೆ ನೀರು ನಿಂತು ಕೆರೆಯಂತಾಗಿದೆ. ಇದರಿಂದ ಹೊರಡುವ ದುರ್ವಾಸನೆ ಹಾಗೂ ಸೊಳ್ಳೆ ಕಾಟದಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿನಿಯರು ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ.
ಅಲ್ಲದೆ ಸೊಳ್ಳೆಗಳ ಉಪಟಳ ಹೆಚ್ಚಿದ್ದು, ಡೆಂಘೆ ಸೇರಿ ಇತರ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.