ದೇವದುರ್ಗದ ತಾಲೂಕು ಆಡಳಿತಸೌಧ ರಸ್ತೆಯಲ್ಲಿ ಆಯೋಜಿಸಿದ್ದ ಎಚ್‌ಐವಿ ಕುರಿತು ಬೀದಿನಾಟಕ ಪ್ರದರ್ಶನಕ್ಕೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸವ ಹಿರೇಮಠ ಚಾಲನೆ ನೀಡಿದರು.  
ರಾಯಚೂರು

ಎಚ್‌ಐವಿ ಸೋಂಕಿನ ಜಾಗೃತಿ ಅಗತ್ಯ

ದೇವದುರ್ಗ: ಅಸುರಕ್ಷಿತ ಲೈಂಗಿಕ ಕ್ರಿಯೆ, ರಕ್ತ ಸ್ವೀಕಾರದಿಂದ ಎಚ್‌ಐವಿ ಸೋಂಕು ಹರಡಲಿದ್ದು, ಈ ಬಗ್ಗೆ ಯುವಜನತೆಗೆ ಜಾಗೃತಿ ಮೂಡಿಸಬೇಕು ಎಂದು ಟಿಎಚ್‌ಒ ಬನದೇಶ್ವರ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧ ರಸ್ತೆಯಲ್ಲಿ ಜಿಲ್ಲಾ ಆರೊಗ್ಯ ಇಲಾಖೆ, ಜ್ಞಾನೇಶ್ವರ ಕಲಾತಂಡ ಹಾಗೂ ಶ್ರೀಕೃಷ್ಣ ಪಾರಿಜಾತ ಕಂಪನಿಯಿಂದ ಆಯೋಜಿಸಿದ್ದ ಏಡ್ಸ್ ಜಾಗೃತಿ ಕುರಿತು ಬೀದಿನಾಟಕಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. 
ಎಚ್‌ಐವಿ ಸೋಂಕು ಅಸುರಕ್ಷಿತ ಲೈಂಗಿಕ ಕ್ರಿಯೆ, ರಕ್ತದಾನ ಸ್ವೀಕಾರ, ಮರುಬಳಕೆ ಸಿರಿಂಜ್ ಸೇರಿ ಅಸುರಕ್ಷಿತ ಚಿಕಿತ್ಸೆಯಿಂದ ಸೋಂಕು ಹರಡುವ ಸಾಧ್ಯತೆಯಿದೆ. ಬಹುಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಬೀದಿನಾಟಕ ಜನರ ಮನಸ್ಸಿನ ಮೇಲೆ ಗಾಢಪರಿಣಾಮ ಬೀರುತ್ತದೆ. ಹೀಗಾಗಿ ಬೀದಿನಾಟಕ ಮೂಲಕ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸವ ಹಿರೇಮಠ, ಸೋಮಪ್ಪ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಐಸಿಟಿ ಆಪ್ತ ಸಮಾಲೋಚಕ ನಂದಕುಮಾರ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಾಮಪ್ಪ, ಆಶಾ ಕಾರ್ಯಕರ್ತೆ ಶಾಂತಮ್ಮ ಹಾಗೂ ಕಲಾವಿದರು ಇದ್ದರು.