ನರಸರಡ್ಡಿ 
ರಾಯಚೂರು

ರಸ್ತೆ ವಿಸ್ತರಣೆ ಕಾಮಗಾರಿಗೆ ಸಹಕರಿಸಿ

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಮನವಿ
  • ಮಸ್ಕಿ ರಸ್ತೆ ವಿಸ್ತರಣೆಗೆ ಪುರಸಭೆ ಯೋಜನೆ
ಮಸ್ಕಿ: ಪಟ್ಟಣದ ಅಶೋಕ ವೃತ್ತದಿಂದ ಮುದಗಲ್ ರಸ್ತೆಯಲ್ಲಿನ ಅಶೋಕನ ಶಿಲಾಶಾಸನದವರೆಗೆ ರಸ್ತೆ ವಿಸ್ತರಣೆಗೆ ಪುರಸಭೆ ಯೋಜನೆ ರೂಪಿಸಿದ್ದು, ಬೀದಿಬದಿ ವ್ಯಾಪಾರಸ್ಥರು ಹಾಗೂ ಸ್ಥಳೀಯರು ಸಹಕರಿಸಬೇಕು ಎಂದು ಮುಖ್ಯಾಧಿಕಾರಿ ನರಸರಡ್ಡಿ ಮನವಿ ಮಾಡಿದರು.
ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆಯಿಂದ ಕೈಗೊಳ್ಳುವ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಗಡಿ ಗುರುತು ಮಾಡುವ ವೇಳೆ ಮಾತನಾಡಿದರು. ಒಟ್ಟು 80 ಅಡಿ ರಸ್ತೆ ವಿಸ್ತರಣೆ ಮಾಡಲು ನಿರ್ಣಯಿಸಿದ್ದು, ಸಾರ್ವಜನಿಕರು ಸಹಕರಿಸಬೇಕು. ಶಾಸಕ ಬಸನಗೌಡ ತುರ್ವಿಹಾಳ ಕೆಕೆಆರ್‌ಡಿಬಿಯಿಂದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 10 ಕೋಟಿ ರೂ. ಮಂಜೂರು ಮಾಡಿಸಿದ್ದು, ಇದರಲ್ಲಿ ಅಶೋಕ ಶಾಸನದವರೆಗಿನ ರಸ್ತೆ, ರಸ್ತೆ ವಿಭಜಕ, ಎರಡು ಬದಿ ವಿದ್ಯುತ್ ದೀಪಗಳ ಅಳವಡಿಕೆ, ಬೃಹತ್ ಅಶೋಕನ ಸ್ತಂಭ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿ ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದರು.
100 ಅಡಿ ರಸ್ತೆ ವಿಸ್ತರಣೆಗೆ ಸರ್ಕಾರ ಮುಂದಾಗಿತ್ತು. ಆದರೆ, ಸ್ಥಳೀಯ ವ್ಯಾಪಾರಿಗಳು, ರಸ್ತೆಯ ಪಕ್ಕದಲ್ಲಿರುವ ಸ್ಥಳೀಯರಿಗೆ ಸಾರ್ವಜನಿಕರಿಗೆ ತೊಂದರೆಯಾಗದಿರಲಿ ಎಂದು 80 ಅಡಿ ಗುರುತು ಮಾಡಲಾಗಿದೆ. ಗುರುತಿನ ಒಳಗೆ ಇರುವ ಅಂಗಡಿ-ಮುಂಗಟ್ಟುಗಳನ್ನು ಆದಷ್ಟು ಬೇಗ ತೆರವುಗೊಳಿಸಬೇಕೆಂದು ಸೂಚಿಸಿದರು. ಇನ್ನು ರಸ್ತೆಬದಿಯ ವ್ಯಾಪಾರಿಗಳು 60 ಅಡಿ ರಸ್ತೆ ನಿರ್ಮಿಸಿ ವ್ಯಾಪಾರಕ್ಕೆ ಅನೂಕೂಲ ಮಾಡಿಕೊಡಿ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಮತ್ತು ಪುರಸಭೆ ಅಧ್ಯಕ್ಷ ಸುರೇಶ ಹರಸೂರುಗೆ ಕೋರಿದ್ದಾರೆ ಎನ್ನಲಾಗಿದೆ.