ದೇವದುರ್ಗದ ಅಬ್ಬು ಮೊಹಲ್ಲಾ ಏರಿಯಾದಲ್ಲಿ ಆನೆಕಾಲು ರೋಗ ಪ್ರಸರಣ ಮೌಲ್ಯಮಾಪನ ಅಭಿಯಾನ ನಡೆಯಿತು. ಜಿಲ್ಲಾ ಸಮೀಕ್ಷಣಾಧಿಕಾರಿ ಕೆ.ಗಣೇಶ, ರಾಜ್ಯ ಸಹಾಯಕ ರೋಗ ಸಂಶೋಧಕ ಚಿಂತೆಲ್‌ಕುಮಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಶಿವಪ್ಪ, ರವಿ ಇದ್ದರು. 
ರಾಯಚೂರು

ಆನೆಕಾಲು ರೋಗ ನಿರ್ಮೂಲನೆಗೆ ಸಹಕರಿಸಿ

ಪ್ರವೀಣ ಉದುಸಾ ದಲಬಂಜನ್
ದೇವದುರ್ಗ: ಆನೆಕಾಲು ರೋಗದ ಬಗ್ಗೆ ಜನರು ಆತಂಕಕ್ಕೆ ಒಳಗಾಗದೆ ಮುಂಜಾಗ್ರತೆವಹಿಸಿದರೆ ಕಾಯಿಲೆ ನಿವಾರಣೆ ಮಾಡಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮೀಕ್ಷಣಾಧಿಕಾರಿ ಕೆ.ಗಣೇಶ ಹೇಳಿದರು.
ಪಟ್ಟಣದ ಅಬ್ಬು ಮೊಹಲ್ಲಾ ಏರಿಯಾದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಆನೆಕಾಲು ರೋಗ ಪ್ರಸರಣ ಮೌಲ್ಯಮಾಪನ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ತಾಲೂಕಿನ ಆಯ್ದ 30 ಗ್ರಾಮಗಳಲ್ಲಿ ರೋಗ ನಿರ್ಮೂಲನೆ ಅಭಿಯಾನ ಭಾಗವಾಗಿ ರಾತ್ರಿ ವೇಳೆಯಲ್ಲಿ ಸೋಂಕು ಪ್ರಸರಣದ ಮೌಲ್ಯಮಾಪನ ತಿಳಿಯಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಮಾತನಾಡಿ, ಪ್ರಸರಣ ಮೌಲ್ಯಮಾಪನ ಅಭಿಯಾನ ಜ.21, 22ರಂದು ರಾತ್ರಿ 10ರಿಂದ 12ರವರೆಗೆ ಕೈಗೊಳ್ಳಲಾಗುತ್ತಿದೆ. ರೋಗ ಲಕ್ಷಣ ಇರುವವರಿಗೆ ರಾತ್ರಿ ರಕ್ತ ಲೇಪನ ಕೈಗೊಂಡು ಸೋಂಕು ಪ್ರಸರಣ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಎನ್.ಗಣೆಕಲ್, ಇಟಗಿ, ಕೊಪ್ಪರ, ರಾಮದುರ್ಗ, ಮುಸ್ಟೂರು, ಹಂಚಿನಾಳ ಸೇರಿ 30 ಗ್ರಾಮಗಳಲ್ಲಿ ಅಭಿಯಾನ ಕೈಗೊಳ್ಳಲಾಗಿದೆ. 1278 ರಕ್ತ ಲೇಪನ ಮಾದರಿ ಸಂಗ್ರಹಿಸಲಾಗಿದ್ದು ಅದನ್ನು ರಾಜ್ಯಮಟ್ಟಕ್ಕೆ ಕಳಿಸಲಾಗುವುದು ಎಂದರು.
ರಾಜ್ಯ ಸಹಾಯಕ ರೋಗ ಸಂಶೋಧಕ ಚಿಂತೆಲ್‌ಕುಮಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಶಿವಪ್ಪ, ರವಿ ಹಾಗೂ ಆಶಾ ಕಾರ್ಯಕರ್ತೆಯರು ಇತರರಿದ್ದರು.