ದೇವದುರ್ಗದಲ್ಲಿ ಬುಧವಾರ ಮಧ್ಯಾಹ್ನ ಪುಷ್ಯ ಮಳೆ ಸುರಿಯಿತು.
ದೇವದುರ್ಗ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಪುಷ್ಯಮಳೆ ಉತ್ತಮವಾಗಿ ಸುರಿಯುತ್ತಿದ್ದು, ಮೂರನೇ ದಿನವಾದ ಬುಧವಾರ ಮುಂದುವರಿದಿದೆ. ಇದರಿಂದ ರೈತರ ಬೆಳೆಗಳಿಗೆ ಜೀವಕಳೆ ಬಂದಂತಾಗಿದ್ದು, ಕೃಷಿ ಚಟುವಟಿಕೆಗಳು ಮತ್ತೆ ಗರಿಗೆದರಿವೆ.
ಪುನರ್ವಸು ಮಳೆ 15ದಿನಗಳಿಂದ ಹೇಳಿಕೊಳ್ಳುವಂತೆ ಸುರಿದಿರಲಿಲ್ಲ. ಆಗಾಗ ಬರುವ ಮೋಡಗಳು ಗಾಳಿಯಲ್ಲಿ ತೇಲಿ ಹೋಗುತಿದ್ದವು. ಸೋಮವಾರ ಆಗಮಿಸಿದ ಪುಷ್ಯ ಮಳೆ ಉತ್ತಮವಾಗಿದ್ದು, ಮೂರು ದಿನಗಳಿಂದ ಹಸಿಮಳೆ ಸುರಿಯುತ್ತಿದೆ. ಜಾಲಹಳ್ಳಿ, ಗಬ್ಬೂರು, ಗೂಗಲ್ ಸೇರಿ ಬಹುತೇಕ ಕಡೆ ಮಳೆಯಾಗಿದೆ. ದಿನವಿಡೀ ಮೋಡ ಮುಸುಕಿದ ವಾತಾವರಣವಿತ್ತು.
ಪುಷ್ಯ ಮಳೆಯಿಂದ ಹತ್ತಿ, ತೊಗರಿ, ಶೇಂಗಾ, ಮೆಣಸಿನಕಾಯಿ ಸೇರಿ ವಿವಿಧ ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ. ಅಲ್ಲದೆ ಭತ್ತ ನಾಟಿಗೆ ಗದ್ದೆಗಳು ಸಿದ್ಧಮಾಡಿಕೊಳ್ಳಲು ಅನುಕೂಲವಾಗಿದೆ. ರೈತರು ಬೆಳೆಗಳಿಗೆ ರಸಗೊಬ್ಬರ ಹಾಕುವ ಜತೆಗೆ ಕ್ರಿಮಿನಾಶಕ ಸಿಂಪಡಿಸಲು ಹಾಗೂ ನೀರಾವರಿ ಪ್ರದೇಶದಲ್ಲಿ ಹತ್ತಿ, ಸೂರ್ಯಕಾಂತಿ, ಮೆಣಸಿನಕಾಯಿ ಬಿತ್ತನೆ ಮಾಡಲು ಮುಂದಾಗಿದ್ದಾರೆ.
ಒಂದೆಡೆ ಪುಷ್ಯ ಮಳೆ ರೈತರಿಗೆ ಅನುಕೂಲ ಕಲ್ಪಿಸಿದ್ದರೆ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬುಧವಾರ ನೀರು ನಿಂತು ಜನರಿಗೆ ಸಮಸ್ಯೆ ಉಂಟಾಯಿತು. ಚರಂಡಿ ಹೂಳು ತುಂಬಿದ್ದರಿಂದ ನೀರು ಹರಿಯದೆ ರಸ್ತೆ ಮೇಲೆ ನಿಂತಿದ್ದರಿಂದ ವಾಹನ ಸೇರಿ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಯಿತು.