ಈಚನಾಳ ಗ್ರಾಮದಲ್ಲಿ ಮಳೆಗಾಗಿ ಗುರ್ಜಿ ಪೂಜೆ ಮಾಡಲಾಯಿತು. ಪ್ರಮುಖರಾದ ನಿಂಗನಗೌಡ ಪೊಪಾ, ಅಮರಪ್ಪ ದಳಪತಿ, ರಮೇಶ ದ್ಯಾಪೂರ, ನಾಗಣ್ಣ ದ್ಯಾಪೂರ, ದಸ್ತಗಿರಸಾಬ್, ಶರಣಪ್ಪ ಗೋವಿಂದಪ್ಪ ದಾಸರ, ಹನುಮಂತ ಗೌಂಡಿ, ಸಿದ್ದನಗೌಡ ಇದ್ದರು. 
ರಾಯಚೂರು

ವರುಣ ದೇವರ ಕೃಪೆಗಾಗಿ ಗುರ್ಜಿ ಪೂಜೆ

ಲಿಂಗಸುಗೂರು: ಮಳೆಗಾಗಿ ದೇವರಿಗೆ ಮೊರೆ ಹೋಗುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ತಾಲೂಕಿನ ಈಚನಾಳ ಗ್ರಾಮದಲ್ಲಿ ಜನರು ಗುರ್ಜಿ ಪೂಜೆ ಮಾಡುವ ಮೂಲಕ ಪ್ರಾರ್ಥಿಸಿದರು. 
ಗ್ರಾಮಸ್ಥರು, ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ, ಹಳ್ಳಕೊಳ್ಳ ತಿರುಗಾಡಿ ಬಂದೆ, ಕಾರ ಮಳೆಯೋ ಕಪಾಟ ಮಳೆಯೋ, ಸುರಿಯೋ ಮಳೆಯೋ, ಮಳೆರಾಯ ಎಂದು ಹಾಡುತ್ತ ಬಾಲಕ ತಲೆ ಮೇಲೆ ಹೊತ್ತುಕೊಂಡ ಗುರ್ಜಿಗೆ ನೀರೆರೆದರು. 
ಗುರ್ಜಿ ಹೊತ್ತ ಬಾಲಕನಿಗೆ ಜೋಳ, ಅಕ್ಕಿ ನೀಡಿ ಮಳೆ ಚೆನ್ನಾಗಿ ಸುರಿಯಲೆಂದು ಪ್ರಾರ್ಥಿಸಿದರು. ಗುರ್ಜಿ ಹೊತ್ತು ಮನೆ ಮನೆ ತಿರುಗಿದರೆ ಮಳೆ ಬರುತ್ತದೆ ಎಂಬುದು ಗ್ರಾಮೀಣ ಜನರ ನಂಬಿಕೆಯಾಗಿದೆ. ಕಳೆದ ಜೂನ್ ಮೊದಲ ವಾರದಲ್ಲಿ ಮಳೆಯಾಗಿದ್ದರಿಂದ ರೈತರು ಬಿತ್ತನೆ ಮಾಡಿದ್ದರು. ಆದರೆ, ಕಳೆದೊಂದು ತಿಂಗಳಿಂದ ಮಳೆ ಮರೆಯಾಗಿದ್ದರಿಂದ ನಷ್ಟ ಎದುರಿಸುವಂತಾಗಿದೆ.