ಗೋಲಪಲ್ಲಿ ಗುಂಡಲಬಂಡಾ ಜಲಪಾತ.  
ರಾಯಚೂರು

ಆಕರ್ಷಿಸುತ್ತಿದೆ ಗುಂಡಲಬಂಡಾ ಜಲಪಾತ

ಅಶೋಕ್ ಕುಮಾರ್ ಎನ್

ಲಿಂಗಸುಗೂರು:ಗೋಲಪಲ್ಲಿ ಗುಂಡಲಬಂಡಾ ಜಲಪಾತ ಮಳೆ ಕೊರತೆ ನಡುವೆಯೂ ಮೈದುಂಬಿ ಹರಿಯುತ್ತಿದೆ. ಈ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಮಹಾರಾಷ್ಟ್ರದಲ್ಲಿ ಕಳೆದ ತಿಂಗಳು ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ ಬಲದಂಡೆ ನಾಲೆಗೆ ನೀರು ಹರಿಸಿರುವುದರಿಂದ ಜಲಪಾತಕ್ಕೆ ಜೀವಕಳೆ ಬಂದಿದೆ. ಕಲ್ಲುಬಂಡೆಗಳ ನಡುವೆ ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿರುವ ಜಲಧಾರೆಯನ್ನು ಪ್ರವಾಸಿಗರು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ. ಜಲಪಾತದ ದೃಶ್ಯ ವೈಭವ ನೋಡಲು ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಿದ್ದಾರೆ.
ನಾರಾಯಣಪುರ ಜಲಾಶಯದ 7ಬಿ ವಿತರಣಾ ನಾಲೆಯಿಂದ ಹರಿದು ಬರುವ ಹೆಚ್ಚುವರಿ ನೀರು ಕಲ್ಲು ಬಂಡೆಗಳ ನಡುವೆ ಹರಿದು ಜಲಪಾತವಾಗಿದೆ. ನವೆಂಬರ್ 10ರವರೆಗೆ ಅಂದರೆ ನಾರಾಯಣಪುರ ಬಲದಂಡೆ ನಾಲೆಗೆ ನೀರು ಹರಿಸುವವರೆಗೆ ಈ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಲಿಂಗಸುಗೂರಿನಿಂದ ಕಲಬುರಗಿ ಮಾರ್ಗದಲ್ಲಿ ಗೋಲಪಲ್ಲಿ ಸೇತುವೆಯಿಂದ ಒಂದು ಕಿಮೀ ಕಚ್ಚಾ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೂಲಕ ಜಲಪಾತ ಸ್ಥಳಕ್ಕೆ ಹೋಗಬಹುದು. ಜಲಪಾತ ಅರಣ್ಯ ಪ್ರದೇಶದಲ್ಲಿರುವುದರಿಂದ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ಪ್ರವಾಸೋದ್ಯಮ ಇಲಾಖೆ ಈ ಜಲಪಾತವನ್ನು ಪ್ರವಾಸಿ ತಾಣ ಎಂದು ಗುರುತಿಸಿದೆ.
ಆದರೆ, ಅರಣ್ಯ ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆಯಿಂದ ರಸ್ತೆ, ಜಲಪಾತಕ್ಕೆ ಗ್ಯಾಲರಿ, ವೀಕ್ಷಣಾ ಗೋಪುರ ನಿರ್ಮಾಣ ಮಾಡಿಲ್ಲ. ಇದರಿಂದ ಎರಡೂ ಇಲಾಖೆಗಳಿಗೆ ಪ್ರವಾಸಿಗರು ಹಿಡಿ ಶಾಪ ಹಾಕುತ್ತಿದ್ದಾರೆ. ಕಲ್ಲು ಬಂಡೆ, ಮುಳ್ಳಿನ ಕಂಟಿಗಳ ಮೂಲಕ ತೆರಳಿ ಜಲಪಾತ ನೋಡಲು ಹರಸಾಹಸ ಪಡಬೇಕಾಗಿದೆ. ಅರಣ್ಯ ಇಲಾಖೆಯಿಂದ ಎಚ್ಚರಿಕೆಯ ಫಲಕ ಹಾಕಿದ್ದರೂ ಅರಣ್ಯ ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಜಲಪಾತ ಸ್ಥಳದಲ್ಲಿ ಇರುವುದಿಲ್ಲ.
ಜಲಪಾತದ ವೈಭವ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ರಭಸದಿಂದ ಹರಿಯುವ ನೀರಲ್ಲಿ ಇಳಿಯಲು ಮುಂದಾಗುವ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳಲು ಕೂಡ ಹಾತೊರೆಯುತ್ತಾರೆ. ಹೀಗಾಗಿ ಈ ಪ್ರದೇಶದ ಸುತ್ತ ತಂತಿ ಬೇಲಿ ಅಳವಡಿಸುವುದು ಅಗತ್ಯವಾಗಿದೆ.