ದೇವದುರ್ಗದ ಶಾಸಕರ ಕಚೇರಿ ಮುಂದೆ ಶಾಸಕಿ ಕರೆಮ್ಮ ಪತಿ ಗೋಪಾಲಕೃಷ್ಣಗೆ ಕರ್ನಾಟಕ ಗ್ರಾಪಂ ನೌಕರರ ಸಂಘ ಮನವಿ ಸಲ್ಲಿಸಿತು. ಸಿಐಟಿಯು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ಅಧ್ಯಕ್ಷ ಹೊನ್ನಪ್ಪ ನಾಯಕ, ಪಂಚಯ್ಯ ಕರಿಗಾರ, ಶಿವರಾಜ ನಾಯಕ ಇತರರಿದ್ದರು.
ದೇವದುರ್ಗ, ಗ್ರಾಪಂ ನೌಕರರ ಸಂಘ , ಶಾಸಕರ ಕಚೇರಿ ಮುಂದೆ ಪ್ರತಿಭಟನೆ,
Devdurga, Gram Panchayat Employees Association, protest in front of MLA's office,
ದೇವದುರ್ಗ: ಗ್ರಾಪಂಯಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಕನಿಷ್ಠ 36 ಸಾವಿರ ರೂ. ವೇತನ ನೀಡುವಂತೆ ಒತ್ತಾಯಿಸಿ ಪಟ್ಟಣದ ಶಾಸಕರ ಕಚೇರಿ ಮುಂದೆ ಕರ್ನಾಟಕ ಗ್ರಾಪಂ ನೌಕರರ ಸಂಘ (ಸಿಐಟಿಯು ಸಂಯೋಜಿತ) ಶುಕ್ರವಾರ ಪ್ರತಿಭಟನೆ ನಡೆಸಿತು.
ರಾಜ್ಯದಲ್ಲಿ 63 ಸಾವಿರ ಗ್ರಾಪಂ ನೌಕರರು ಕರವಸೂಲಿಗಾರರು, ಡೇಟಾ ಎಂಟ್ರಿ ಆಪರೇಟರ್, ಸ್ವಚ್ಛತಾಗಾರರು, ಸಿಪಾಯಿ, ನೀರುಗಂಟಿಗಳಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ನೀಡುವ ವೇತನ ಯಾವುದಕ್ಕೂ ಸಾಲುತ್ತಿಲ್ಲ. ಗ್ರಾಪಂ ನೌಕರರು ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಸ್ಪಂದನೆ ದೊರೆಯುತ್ತಿಲ್ಲ. ಸರ್ಕಾರ ನೀಡುವ ವೇತನದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಜೀವನಕ್ಕೆ ಸೂಕ್ತ ಭದ್ರತೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಎಲ್ಲ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಕನಿಷ್ಠ 36 ಸಾವಿರ ರೂ. ವೇತನ ನೀಡಬೇಕು. ಸೇವಾ ಹಿರಿತನದಲ್ಲಿ ವೇತನ ಹೆಚ್ಚಿಸಬೇಕು. ಕೆಲಸದ ವೇಳೆ ನಿಧನರಾದರೆ 10ಲಕ್ಷ ರೂ. ಇಡುಗಂಟು, ಮಾಸಿಕ 6ಸಾವಿರ ಪಿಂಚಣಿ ನೀಡಬೇಕು. 1.20 ಲಕ್ಷ ರೂ. ಕಡಿಮೆ ಆದಾಯವಿರುವ ಸಿಬ್ಬಂದಿಗೆ ಪಡಿತರ ಸೌಲಭ್ಯ ನೀಡಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆ ಸೃಜನೆ ಮಾಡಿ ಭದ್ರತೆ ಒದಗಿಸಬೇಕು. ಇ- ಹಾಜರಾತಿ ಲೋಪದೋಷ ಪಂಚತಂತ್ರದಲ್ಲಿ ಸರಿಪಡಿಸುವವರೆಗೆ ಪೂರ್ಣ ವೇತನ ನೀಡಬೇಕು. ಗ್ರಾಪಂಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತುಂಬಬೇಕು. ಗ್ರೇಡ್-1 ಕಾರ್ಯದರ್ಶಿಗಳಿಂದ ಪಿಡಿಒ ಹುದ್ದೆಗೆ ಜಿಲ್ಲಾ ಮಟ್ಟದಲ್ಲಿ ಮುಂಬಡ್ತಿ ನೀಡಬೇಕು. ಗ್ರೇಡ್-1 ಗ್ರಾಪಂಗಳನ್ನು ಜನಸಂಖ್ಯೆಗೆ ಆಧರಿತವಾಗಿ ಮೇಲ್ದರ್ಜೆಗೆರಿಸುವುದೂ ಸೇರಿ ಇತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಸಿಐಟಿಯು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ತಾಲೂಕು ಅಧ್ಯಕ್ಷ ಹೊನ್ನಪ್ಪ ನಾಯಕ, ಖಜಾಂಚಿ ಪಂಚಯ್ಯ ಕರಿಗಾರ, ಪ್ರಮುಖರಾದ ಶಿವರಾಜ ನಾಯಕ, ಕಾಶಿಲಿಂಗ, ಮುದ್ದುರಂಗಪ್ಪ ಯರಕಮಟ್ಟಿ, ಸಿದ್ದರೆಡ್ಡಿ, ರೇಣುಕಾ, ಅನಸೂಯ, ಚನ್ನಮ್ಮ, ನಾಗರತ್ನಾ ಇತರರಿದ್ದರು.