ಹೂವಿನಹೆಡಗಿಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಗುರುನಮನ ಕಾರ್ಯಕ್ರಮವನ್ನು ಶಾಸಕಿ ಕರೆಮ್ಮ ಜಿ.ನಾಯಕ ಉದ್ಘಾಟಿಸಿದರು. ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ತಾಪಂ ಇಒ ಬಸವರಾಜ ಹಟ್ಟಿ, ಎಪಿಎಂಸಿ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಇದ್ದರು. 
ರಾಯಚೂರು

ಸರ್ಕಾರ ಶಿಕ್ಷಕರನ್ನು ನೇಮಕ ಮಾಡಲಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಶಾಸಕಿ ಕರೆಮ್ಮ ನಾಯಕ ಆಗ್ರಹ
  • ಹೂವಿನಹೆಡಗಿಯಲ್ಲಿ ಗುರುನಮನ ಕಾರ್ಯಕ್ರಮ
ದೇವದುರ್ಗ: ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರ ನೇಮಕ ಮಾಡಿಕೊಂಡರೆ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ. ಸರ್ಕಾರ ಬಾಯಿ ಮಾತಿನಲ್ಲಿ ಸರ್ಕಾರಿ ಶಾಲೆ ಮುಚ್ಚಲ್ಲ ಎಂದು ಹೇಳುವ ಬದಲು ಶೀಘ್ರ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಶಾಸಕಿ ಕರೆಮ್ಮ ಜಿ.ನಾಯಕ ಒತ್ತಾಯಿಸಿದರು.
ತಾಲೂಕಿನ ಹೂವಿನಹೆಡಗಿಯಲ್ಲಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರ ಸಂಘದಿಂದ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಗುರುನಮನ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ 20 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದ್ದು, ಈ ಪೈಕಿ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲೇ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದರು.
ಎರಡ್ಮೂರು ವರ್ಷಗಳಿಂದ ಸರ್ಕಾರ ಶಿಕ್ಷಕರನ್ನು ನೇಮಿಸಿಲ್ಲ. ಇಲ್ಲಿರುವ ಶಿಕ್ಷಕರು ವರ್ಗಾವಣೆ, ನಿವೃತ್ತರಾಗಿದ್ದಾರೆ. ಅವರ ಜಾಗಕ್ಕೆ ಅತಿಥಿಗಳನ್ನು ನೇಮಿಸಿಕೊಂಡಿದೆ. ಆದರೆ, ಶಿಕ್ಷಕರಿಂದ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ. ಶಿಕ್ಷಕರು ಪ್ರತಿ ವಿದ್ಯಾರ್ಥಿಯನ್ನು ತಮ್ಮ ಮಗುವಿನಂತೆ ನೋಡಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಮುರುಳೀಧರ ಮಾತನಾಡಿ, ಸರ್ಕಾರಿ ಶಾಲೆ ಶಿಕ್ಷಕರಿಗೆ ಅನ್ಯ ಕೆಲಸದ ಒತ್ತಡ ಹೆಚ್ಚಾಗಿ ಬೋಧನೆಗೆ ಸಮಯ ಕೊಡಲು ಆಗುತ್ತಿಲ್ಲ. ಸರ್ಕಾರ ಶಿಕ್ಷಕರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕು. ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಗುಣಮಟ್ಟದ ಶಿಕ್ಷಣಕ್ಕೆ ಸೂಕ್ತ ಯೋಜನೆ ರೂಪಿಸಬೇಕು ಎಂದರು.
ವಿವಿಧ ಶಾಲೆಗಳ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ತಾಪಂ ಇಒ ಬಸವರಾಜ ಹಟ್ಟಿ, ಎಪಿಎಂಸಿ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ, ಪ್ರಮುಖರಾದ ಶರಣಗೌಡ ಮಾಪಾ, ಹನುಮಂತ್ರಾಯ ಶಾಖೆ, ನೇಮಣ್ಣ, ವಿರುಪನಗೌಡ, ರಂಗನಾಥ, ಶಾಂತಗೌಡ, ಬಸವರಾಜ ಪಾಟೀಲ್, ರಂಗಪ್ಪ ಇತರರಿದ್ದರು.