ರಾಯಚೂರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ, ನಕಲಿ ಜಾತಿ ಪ್ರಮಾಣ ಪತ್ರ ಪಡೆದು ವಂಚಿಸುವ ಪ್ರಕರಣಗಳನ್ನು ತ್ವರಿತ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ಸ್ಥಾಪನೆ ಮಾಡಿದ 33 ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ಸಿಬ್ಬಂದಿಗಳನ್ನು ನೇಮಿಸಲು ಒತ್ತಾಯಿಸಿ ಜ.3 ರಂದು ಸಿಂಧನೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಲಾಗುತ್ತದೆಂದು ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ನರಸಿಂಹಲು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2024 ಏಪ್ರಿಲ್ 14 ರಂದು ರಾಜ್ಯ ಸರ್ಕಾರ ವಿಶೇಷ ಠಾಣೆಗಳನ್ನು ಘೋಷಿಸಿದೆ. ಆದರೆ ಸಿಬ್ಬಂದಿಗಳನ್ನೇ ನೇಮಿಸಿಲ್ಲ ದೂರುಗಳು ದಾಖಲಾದರೂ ಆರೋಪಿಗಳನ್ನು ಬಂಧಿಸದೇ ಇರುವದು ನಡೆಯುತ್ತಿದೆ.
ಸ್ವಂತ ಕಟ್ಟಡವೂ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಹೆಸರಿಗೆ ಮಾತ್ರ ಠಾಣೆಗಳಾಗಿ ಉಳಿದಿವೆ. ಈ ಹಿಂದೆ ಜಾತಿ ನಿಂದನೆ, ದೌರ್ಜನ್ಯದಂತಹ ಪ್ರಕರಣಗಳು ದಾಖಲಾದರೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿತ್ತು.
ಅದರೀಗ ದೂರು ದಾಖಲಾದರೂ ಸಿಬ್ಬಂದಿಗಳಿಲ್ಲದೇ ಇರುವದರಿಂದ ವಿಳಂಬವಾಗಿ ಮೂಲ ಆಶಯವೇ ಸಾಕಾರಗೊಳ್ಳದೇ ಹೋಗಿದೆ. ಕೂಡಲೇ ಸರ್ಕಾರ ವಿಶೇಷ ಠಾಣೆಗಳಿಗೆ ಸಿಬ್ಬಂದಿ ನೇಮಿಸಿ ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಿವುಕುಮಾರ ಮ್ಯಾಗಳಮನಿ, ಎಂ.ಆರ್.ಭೇರಿ, ಹನುಮೇಶ ಆರೋಲಿ, ಆಂಜನೇಯ್ಯ ಬಾಪುರು ಇದ್ದರು.