ಚಿತ್ರನಾಳ ಬಳಿ ಹಳ್ಳಕ್ಕೆ ಬಿದ್ದ ಸರ್ಕಾರಿ ಬಸ್.
ಲಿಂಗಸುಗೂರು: ನಾಲತವಾಡದಿಂದ ಆನೆಹೊಸೂರು ಮಾರ್ಗವಾಗಿ ಲಿಂಗಸುಗೂರಿಗೆ ಬರುತ್ತಿದ್ದ ಸರ್ಕಾರಿ ಬಸ್ ಚಿತ್ರನಾಳ ಬಳಿ ಗುರುವಾರ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಹಳ್ಳದಲ್ಲಿ ನೀರಿಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಲಿಂಗಸುಗೂರು ಡಿಪೋದ ಬಸ್ ನಾಲತವಾಡದಿಂದ ಲಿಂಗಸುಗೂರಿಗೆ ಬರುತ್ತಿತ್ತು. ಸುಮಾರು 20 ರಿಂದ 25 ಜನ ಪ್ರಯಾಣಿಕರಿದ್ದರು. ಬಸ್ ಚಿತ್ರನಾಳ ಗ್ರಾಮದ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ.
ನಿರ್ವಾಹಕ ಕಂ.ಚಾಲಕನಾಗಿ ಕರ್ತವ್ಯ ನಿರ್ವಹಿಸುತಿದ್ದ ಗಂಗಪ್ಪ ಹಾಗೂ ಪ್ರಯಾಣಿಕರು ಬಸ್ ಬಿದ್ದ ತಕ್ಷಣ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪಿಐ ಹೊಸಕೇರಪ್ಪ, ಬಸ್ ಡಿಪೋ ಸಹಾಯಕ ಕಾರ್ಯ ಅಧೀಕ್ಷಕ ಅಚ್ಯುತಕುಮಾರ, ಟ್ರಾಫಿಕ್ ಇನ್ಸ್‌ಪೆಕ್ಟರ್ ಮರಿಯಪ್ಪ ಭೇಟಿ ನೀಡಿ ಪರಿಶೀಲಿಸಿದರು.