ಮುದಗಲ್ ಸಾರಿಗೆ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿರುವುದು ಹಾಗೂ ತಾಲೂಕು ಕೇಂದ್ರ ಘೋಷಣೆಗೆ ಒತ್ತಾಯಿಸಿ ಮುದಗಲ್ ಬಂದ್‌ಗೆ ವ್ಯಾಪಾರಿಗಳು ಮಳಿಗೆಗಳನ್ನು ಬಂದ್ ಮಾಡಿ ಬೆಂಬಲಿಸಿದರು.
- ವಿವಿಧ ಸಂಘಟನೆಗಳು, ನಾಗರಿಕರ ಬೆಂಬಲ
- ಸಿಎಂ ಬಳಿ ನಿಯೋಗ ತೆರಳಲು ನಿರ್ಧಾರ
ಮುದಗಲ್: ಇಲ್ಲಿನ ಜನರ ಬಹುವರ್ಷಗಳ ಬೇಡಿಕೆಯಾದ ಮುದಗಲ್ ತಾಲೂಕು ಕೇಂದ್ರ ಘೋಷಣೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕರೆ ನೀಡಿದ್ದ ಮುದಗಲ್ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಛಾವಡಿ ಕಟ್ಟೆವರೆಗೆ ತಾಲೂಕು ಹೋರಾಟ ಸಮಿತಿ, ಕನ್ನಡಪರ, ರೈತಪರ, ದಲಿತಪರ, ಕಾರ್ಮಿಕಪರ, ಪ್ರಗತಿಪರ ಸೇರಿದಂತೆ ವಿವಿಧ ಸಂಘಟನೆಗಳು, ನಾಗರಿಕರು ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ಗಂಗಣ್ಣನವರ್ ಅವರ ಕನಸಿನ ಕೂಸು ಮುದಗಲ್ ತಾಲೂಕು ಘೋಷಣೆ, ಐತಿಹಾಸಿಕ ಕೋಟೆ ಉತ್ಸವ ಹಾಗೂ ಪಟ್ಟಣದಲ್ಲಿ ಕುಡಿವ ನೀರಿನ ಸಮರ್ಪಕ ಪೂರೈಕೆ ಯೋಜನೆಗಳು ತ್ವರಿತ ಅನುಷ್ಠಾನವಾಗಲಿ ಎಂದು ಪಟ್ಟು ಹಿಡಿದರು. ಕಾರ್ಮಿಕರು, ವರ್ತಕರು, ವ್ಯಾಪಾರಿಗಳು, ಮಾಲೀಕರು ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಮಾನಪ್ಪ ಡಿ.ವಜ್ಜಲ್ ಮಾತನಾಡಿ, ಮುದಗಲ್ ತಾಲೂಕು ಕೇಂದ್ರವಾಗಿಸಲು ಎಲ್ಲ ಅರ್ಹತೆ ಹೊಂದಿದ್ದರೂ ಸರ್ಕಾರ ಘೋಷಣೆಗೆ ಮುಂದಾಗುತ್ತಿಲ್ಲ. ಆದ್ದರಿಂದ ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲಿಸಬೇಕಿದೆ. ಈಗಾಗಲೇ ಸದನದಲ್ಲಿ ಮತ್ತು ಪ್ರತ್ಯೇಕವಾಗಿ ಸಿಎಂ ಹಾಗೂ ಕಂದಾಯ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ ಎಂದರು. ನಂತರ ಅನೇಕ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ರಾಜ್ಯ ಬಜೆಟ್‌ಗೂ ಮುನ್ನವೇ ಸಿಎಂ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲು ನಿರ್ಣಯಿಸಿದರು.
ಮುಜಾಗ್ರತಾ ಕ್ರಮವಾಗಿ ಸಿಪಿಐಗಳಾದ ರಾಮಣ್ಣ ಜಲಗಾರ, ಹೊಸಕೇರೆಪ್ಪ, ಎಸ್.ಮಂಜುನಾಥ, ಪಿಎಸ್‌ಐಗಳಾದ ರಂಗಯ್ಯ, ವೆಂಕಟೇಶ ಮಾಡಗಿರಿ, ಒಂದು ಡಿ.ಆರ್.ತುಕಡಿ ಸೇರಿದಂತೆ 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಶಾಸಕ ಮಾನಪ್ಪ ಡಿ.ವಜ್ಜಲ್ ಹಾಗೂ ತಹಸೀಲ್ದಾರ್ ಪುರುರಾಜ್ ಸಿಂಗ್ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಿದರು.
ಪ್ರಮುಖರಾದ ಸಿದ್ದಯ್ಯಸ್ವಾಮಿ ಸಾಲಿಮಠ, ಡಾ.ಗುರುರಾಜ ದೇಶಪಾಂಡೆ, ಅಶೋಕಗೌಡ ಪಾಟೀಲ್ ಆದಾಪೂರ, ಶರಣಪ್ಪ ಕಟ್ಟಿಮನಿ, ಗುರುಬಸಪ್ಪ ಸಜ್ಜನ್, ರಘುವೀರ ಮೇಗಳಮನಿ, ಸಣ್ಣ ಸಿದ್ದಯ್ಯ, ಬಸವರಾಜ ಬಂಕದಮನಿ, ಎಸ್.ಎ.ನಯೀಮ್, ಸಂಜೀವ ಛಲವಾದಿ, ಶಿವಶಂಕರಗೌಡ ಉಪ್ಪಾರನಂದಿಹಾಳ, ಗುಂಡಪ್ಪ ಗಂಗಾವತಿ, ದೇವಪ್ಪ ರಾಠೋಡ, ಶಶಿಧರ ಕಂಚಿಮಠ ಸೇರಿ ಅನೇಕರಿದ್ದರು.
ಸಂಚಾರ ಸ್ಥಬ್ಧ: ಬಂದ್ ಪರಿಣಾಮ ಹೆದ್ದಾರಿ ರಸ್ತೆ ಸಂಪೂರ್ಣ ಸ್ಥಬ್ಧವಾಗಿತ್ತು. ಸಾರಿಗೆ ಸಂಚಾರವಿಲ್ಲದೇ ಬಸ್ ತಂಗುದಾಣ ಬಿಕೋ ಎನ್ನುತ್ತಿತ್ತು. ಇದರಿಂದ ಅಲ್ಲಲ್ಲಿ ಪ್ರಯಾಣಿಕರ ಪರದಾಟ ಹಾಗೂ ಖಾಸಗಿ ವಾಹನಗಳ ಓಡಾಟ ಕಂಡುಬಂತು. ರಾಷ್ಟ್ರೀಕೃತ ಮತ್ತು ಸ್ಥಳೀಯ ಸಹಕಾರಿ ಬ್ಯಾಂಕ್‌ಗಳು ಮಾತ್ರ ಕಾರ್ಯನಿರ್ವಹಿಸಿದವು. ಮಾಹಿತಿಯಿಲ್ಲದೇ ಪಟ್ಟಣಕ್ಕೆ ಬಂದಿದ್ದ ಕೆಲವರು ಉಪಹಾರ, ಚಹಾ, ನೀರಿಗಾಗಿ ಪರಿತಪಿಸುವಂತಾಯಿತು.
ಕಳೆದ 2008ರಿಂದಲೂ ಮುದಗಲ್ ತಾಲೂಕು ಘೋಷಣೆ, ಕೋಟೆ ಉತ್ಸವ ಹಾಗೂ ಸಮರ್ಪಕ ಕುಡಿವ ನೀರಿನ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಸದನದಲ್ಲಿ ಮತ್ತು ಸಿಎಂ ಬಳಿ ಮನವಿ ಸಲ್ಲಿಸಲಾಗಿದೆ. ಶೀಘ್ರ ತಾಲೂಕು ಹೋರಾಟ ಸಮಿತಿ ಮತ್ತು ಪ್ರಮುಖರ ನಿಯೋಗ ಸಿಎಂ ಬಳಿ ತೆರಳಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು. — > ಮಾನಪ್ಪ ಡಿ.ವಜ್ಜಲ್, ಶಾಸಕ, ಲಿಂಗಸಗೂರು
ನಮ್ಮ ಹಕ್ಕು ಪಡೆಯಲು ಬೀದಿಗಿಳಿದು ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಹೋರಾಟ ನಿಂತ ನೀರಾಗಬಾರದು. ಬೇಡಿಕೆ ಈಡೇರುವವರೆಗೂ ಹೋರಾಟಕ್ಕೆ ಬ್ರೇಕ್ ಹಾಕಬಾರದು.
— > ಸಿದ್ದಯ್ಯಸ್ವಾಮಿ ಸಾಲಿಮಠ, ಸ್ವಾಮೀಜಿ, ಮುದಗಲ್