ಸಿಂಧನೂರು ತಾಲೂಕಿನ ಜವಳಗೇರಾ ಅಮೃತ ನಗರದ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಪೌಷ್ಟಿಕ ಆಹಾರ ಸಪ್ತಾಹ ಜಾಗೃತಿ ಕಾರ್ಯಕ್ರಮ ನಡೆಯಿತು.
ಸಿಂಧನೂರು: ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯಕರ ಬದುಕು ಸಾಧ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ತಿಳಿಸಿದರು.
ಜವಳಗೇರಾ ಅಮೃತ ನಗರದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಾಗೃತಿ ಮಹಿಳಾ ಸಂಘಟನೆ ಪೋತ್ನಾಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಗತ್ಯ. ಶಿಶುಗಳಿಗೆ ಆರು ತಿಂಗಳುವರೆಗೆ ತಾಯಿ ಹಾಲು ನೀಡಬೇಕು. ನಂತರ ತಾಯಿಹಾಲಿನ ಜತೆಗೆ ಪೌಷ್ಟಿಕಾಂಶಯುಕ್ತ ಪೂರಕ ಆಹಾರ ನೀಡಬೇಕು. ತಾಯಿ ಆರೋಗ್ಯವಾಗಿದ್ದರೆ ಮಗು ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಇದಕ್ಕಾಗಿ ಉತ್ತಮ ಆಹಾರ ಹಾಗೂ ಸೂಕ್ತ ಆರೈಕೆ ಅಗತ್ಯ ಎಂದು ತಿಳಿಸಿದರು.
ಜಾಗೃತಿ ಮಹಿಳಾ ಸಂಘಟನೆ ಸದಸ್ಯೆ ಆರೋಗ್ಯಮ್ಮ ಮಾತನಾಡಿ, ಗರ್ಭಿಣಿ ಹಾಗೂ ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸುವ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಿಕೊಳ್ಳಬೇಕು. ರಕ್ತಹೀನತೆ ತಡೆಗಟ್ಟಲು ಹಸಿರು ಸೊಪ್ಪು, ಹಣ್ಣು, ತರಕಾರಿ, ಬೆಲ್ಲ, ಶೇಂಗಾ ಸೇರಿದಂತೆ ಕಬ್ಬಿಣ ಮತ್ತು ಪೌಷ್ಟಿಕಾಂಶ ಸಮೃದ್ಧ ಆಹಾರ ಸೇವಿಸುವಂತೆ ಸಲಹೆ ನೀಡಿದರು.
ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ನಿಂಗಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್, ಅಂಗನವಾಡಿ ಕಾರ್ಯಕರ್ತೆ ಆರೋಗ್ಯಮ್ಮ, ಆಶಾ ಕಾರ್ಯಕರ್ತೆ ಸುಜಾತಾ, ಅನಿತಾ, ಮಹೇಶ್ವರಿ, ಸುಪ್ರೀತಾ, ಅಮೃತಮ್ಮ, ಎಲ್ಲಮ್ಮ, ದುರ್ಗಮ್ಮ, ನಿರ್ಮಲಾ ಇದ್ದರು.